ಪುತ್ತೂರು ತಾಲೂಕು ಆಸ್ಪತ್ರೆಯ ಸಮೀಪದಲ್ಲಿರುವ ಹಳೇ ತಾಲೂಕು ಕಚೇರಿ ಕಟ್ಟಡವನ್ನು ಆಸ್ಪತ್ರೆಯಾಗಿ ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ.  
ದಕ್ಷಿಣ ಕನ್ನಡ

ವೈದ್ಯ ಕಾಲೇಜು ಪ್ಲ್ಯಾನ್ ಬಿ ವೇಗ PUTTUR

೩೦೦ ಹಾಸಿಗೆ ಆಸ್ಪತ್ರೆಗೆ ಸಿದ್ಧತೆ | ಹಳೇ ತಾಲೂಕು ಕಚೇರಿ ಕಟ್ಟಡ ನವೀಕರಣ

ಪುತ್ತೂರು: ಪುತ್ತೂರು ಮೆಡಿಕಲ್ ಕಾಲೇಜು ತರಗತಿಗಳನ್ನು ೨೦೨೭-೨೮ನೇ ಸಾಲಿನಲ್ಲೇ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಶಾಸಕ ಅಶೋಕ್ ಕುಮಾರ್ ರೈ ನಗರದೊಳಗಿನ ಸರ್ಕಾರಿ ಕಟ್ಟಡಗಳನ್ನು ಬಳಸಿಕೊಂಡು ಪ್ಲ್ಯಾನ್ ಬಿಗೆ ಯೋಜನೆ ರೂಪಿಸಿದ್ದರು. ಅದರಂತೆ ಈಗ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಪರಿಶೀಲನೆಗೆ ಬರುವ ತಂಡಕ್ಕೆ ಮೂಲಸೌಕರ್ಯಗಳನ್ನು ತೋರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ತಾಲೂಕು ಆಸ್ಪತ್ರೆಯ ಆವರಣಕ್ಕೆ ಹೊಂದಿಕೊಂಡಿರುವ ಹಳೇ ತಾಲೂಕು ಕಚೇರಿಯ ಕಟ್ಟಡದಲ್ಲಿ ಹಿಂದೆ ಮಹಿಳಾ ಕಾಲೇಜು ನಡೆಸಲಾಗುತ್ತಿತ್ತು. ಅಡಿಸ್ಥಳವನ್ನು ಶಾಸಕ ಸಂಜೀವ ಮಠಂದೂರು ಅವಽಯಲ್ಲಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿತ್ತು. ಈಗ ತುರ್ತಾಗಿ ತಾಲೂಕು ಆಸ್ಪತ್ರೆಯನ್ನು ೩೦೦ ಹಾಸಿಗೆಗೆ ಏರಿಸಬೇಕೆಂಬ ನಿಟ್ಟಿನಲ್ಲಿ ಹಳೆಯ ಕಟ್ಟಡವನ್ನು ಆಸ್ಪತ್ರೆಯಾಗಿ ಮಾರ್ಪಡಿಸುವ ಕಾರ್ಯ ಭರದಿಂದ ಸಾಗಿದೆ.

ಹಳೆಯ ನ್ಯಾಯಾಲಯ ಕಟ್ಟಡವನ್ನು ಮೆಡಿಕಲ್ ಕಾಲೇಜಿನ ತರಗತಿ ವಿಭಾಗವಾಗಿ ಮಾಡುವ ನಿಟ್ಟಿನಲ್ಲಿ ತಜ್ಞರಿಂದ ಪರಿಶೀಲನೆ ನಡೆಸಿ, ತರಗತಿ ನಡೆಸಲು ಸೂಕ್ತವಾಗಿದೆ ಎಂಬುದನ್ನು ದೃಢಪಡಿಸಲಾಗಿತ್ತು. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರಿಂದ ಬುಧವಾರ ವಿಶೇಷ ಅಧಿಕಾರಿ ಡಾ.ಲೋಹಿತ್ ಕುಮಾರ್, ಡಾ.ಯದುರಾಜ್ ಅವರು ಕಟ್ಟಡವನ್ನು ಅಧಿಕೃತವಾಗಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು ಕೆಲವೇ ದಿನಗಳಲ್ಲಿ ಕಟ್ಟಡದ ನವೀಕರಣ ಕಾಮಗಾರಿ ಆರಂಭವಾಗಲಿದೆ.

ನೋಂದಣಿಗೆ ಅರ್ಜಿ ಸಲ್ಲಿಕೆ

ಮೆಡಿಕಲ್ ಕಾಲೇಜು ನೋಂದಣಿ ಪ್ರಕ್ರಿಯೆಗೆ ವೈದ್ಯಕೀಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಅ.೮ಕ್ಕೆ ಅರ್ಜಿ ಹಾಕಲಾಗಿದ್ದು, ಮುಂದಿನ ತಿಂಗಳು ತಂಡ ಪರಿಶೀಲನೆಗೆ ಬರಲಿದೆ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ಗೆ ನವೆಂಬರ್‌ನಲ್ಲಿ ಮೊದಲ ಹಂತದ ಅರ್ಜಿ ಸಲ್ಲಿಕೆಯಾದರೆ, ಡಿಸೆಂಬರ್ ಅಂತ್ಯದಲ್ಲಿ ಎರಡನೇ ಹಂತದ ಅರ್ಜಿ ಸಲ್ಲಿಕೆ ನಡೆಯಲಿದೆ. ಅಗತ್ಯ ಪ್ರಕ್ರಿಯೆಗಳನ್ನು ನಡೆಸಿಕೊಂಡು ಜನವರಿಯಲ್ಲಿ ಕೇಂದ್ರದ ತಂಡ ಪರಿಶೀಲನೆಗೆ ಆಗಮಿಸುವ ನಿರೀಕ್ಷೆ ಇದೆ.

ಸರ್ಕಾರಿ ಆಸ್ಪತ್ರೆಯಲ್ಲೇ ಕಚೇರಿ

ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜಿನ ವಿಶೇಷ ಅಧಿಕಾರಿಯಾಗಿ ಡಾ.ಲೋಹಿತ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲೇ ಅವರಿಗೆ ವಿಶೇಷ ಕಚೇರಿಯ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಅವರು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಸೇಡಿಯಾಪು ನಿವೇಶನದಲ್ಲೂ ಕಾಮಗಾರಿ

ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ನಿಟ್ಟಿನಲ್ಲಿ ಸೇಡಿಯಾಪಿನಲ್ಲಿ ಹೊಸದಾಗಿ ೩೦೦ ಹಾಸಿಗೆಯ ಆಸ್ಪತ್ರೆಗೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದು, ಅಲ್ಲಿ ಜಾಗ ಸಮತಟ್ಟು ಕಾರ್ಯ ಭರದಿಂದ ಸಾಗಿದೆ. ಜತೆಗೆ ಡಾಂಬರು ರಸ್ತೆಯಿಂದ ನಿವೇಶನಕ್ಕೆ ಹೋಗುವ ರಸ್ತೆಗಳನ್ನು ಸಾಕಷ್ಟು ಅಗಲಗೊಳಿಸುವ ಕಾರ್ಯವೂ ನಡೆಯುತ್ತಿದೆ. ಅಗತ್ಯ ವಿದ್ಯುತ್ ಪೂರೈಕೆಗೆ ಬೇಕಾದ ೨೫೦ ಕೆವಿ ಪರಿವರ್ತಕ ಅಳವಡಿಸಲಾಗುತ್ತಿದೆ.

ಸೇಡಿಯಾಪಿನಲ್ಲಿ ೩೦೦ ಹಾಸಿಗೆ ಆಸ್ಪತ್ರೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ನಡುವೆ ಪ್ಲ್ಯಾನ್ ಬಿಯಂತೆ ಮೆಡಿಕಲ್ ಕಾಲೇಜು ಪ್ರಾರಂಭಿಸುವುದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗಳು ಮುಗಿದು ಪರಿಶೀಲನೆಗೆ ಸಿದ್ಧವಾಗಲಿದೆ.
ಅಶೋಕ್ ಕುಮಾರ್ ರೈ, ಶಾಸಕ
ಸರ್ಕಾರದ ಹಳೆಯ ಕಟ್ಟಡಗಳಲ್ಲಿ ಪ್ಲ್ಯಾನ್ ಬಿ ಪ್ರಕಾರ ತರಗತಿ ಹಾಗೂ ಆಸ್ಪತ್ರೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ೬.೫೩ ಕೋಟಿ ರೂ. ಅನುದಾನದಲ್ಲಿ ಅತ್ಯಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶವಿದೆ. ಮೆಡಿಕಲ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ನೀಡಿದ ಪಟ್ಟಿಗಳ ಪ್ರಕಾರ ಅಗತ್ಯ ಸಲಕರಣೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಗೆ ೮.೮೯ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ.ಲೋಹಿತ್ ಕುಮಾರ್, ವಿಶೇಷ ಅಧಿಕಾರಿ, ಸರ್ಕಾರಿ ಮೆಡಿಕಲ್ ಕಾಲೇಜು, ಪುತ್ತೂರು