ಪುತ್ತೂರಿನ ಸೇಡಿಯಾಪುವಿನಲ್ಲಿ ಸರ್ಕಾರಿ ಮೆಡಿಕಲ್ ಆಸ್ಪತ್ರೆ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಭೂಮಿಪೂಜೆ ನೆರವೇರಿಸಿದರು. ಅರ್ಚಕ ಶಿವಪ್ರಸಾದ್ ಭಟ್, ಈಶ್ವರ ಭಟ್ ಪಂಜಿಗುಡ್ಡೆ, ಮಹಮ್ಮದ್ ಬಡಗನ್ನೂರು, ಅಮಳ ರಾಮಚಂದ್ರ ಮತ್ತಿತರರು ಇದ್ದರು.  
ದಕ್ಷಿಣ ಕನ್ನಡ

ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿಗೆ ವೇಗ PUTTUR

ಶಾಸಕ ಅಶೋಕ್ ಕುಮಾರ್ ರೈ ಆಶಯ | ಪುತ್ತೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ

ಪುತ್ತೂರು: ಮೆಡಿಕಲ್ ಕಾಲೇಜಿಗೆ ಈಗಾಗಲೇ ೫೫೦ ಕೋಟಿ ರೂ. ಮಂಜೂರಾಗಿದ್ದು, ೧೮೨ ಕೋಟಿ ರೂ. ವೆಚ್ಚದಲ್ಲಿ ೩೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ತಿಂಗಳೊಳಗೆ ಮುಖ್ಯಮಂತ್ರಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆಸಲಿದ್ದಾರೆ. ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವಧಿಯಲ್ಲಿ ಆರಂಭವಾಗಿದ್ದ ಮೆಡಿಕಲ್ ಕಾಲೇಜು ಹೋರಾಟ ಮುಂದುವರಿಸಿ, ಈ ಹಂತಕ್ಕೆ ತಲುಪಿಸಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಆರಂಭಿಕ ಹಂತದ ೩೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸೇಡಿಯಾಪುವಿನಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಆಸ್ಪತ್ರೆ ಕಾಮಗಾರಿಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಗುರಿಯಿದೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಫಿಸಿಯೋಥೆರಪಿ, ನರ್ಸಿಂಗ್, ಡೆಂಟಲ್ ಹಾಗೂ ಆಯುರ್ವೇದ ಸೇರಿದಂತೆ ವಿವಿಧ ಕೋರ್ಸ್‌ಗಳು ಆರಂಭವಾಗಲಿವೆ. ಸುಮಾರು ೨೫ ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದ್ದು, ೧೦ರಿಂದ ೧೨ ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಬಹುದು. ಇದರಿಂದ ಪುತ್ತೂರಿನ ಆರ್ಥಿಕತೆ ಹಾಗೂ ನಗರಾಭಿವೃದ್ಧಿಗೂ ವೇಗ ದೊರೆಯಲಿದೆ ಎಂದರು.

ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಡಾ.ರಾಜಾರಾಮ್, ಪಂಚ ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ನಿರೂಪಿಸಿದರು.

ಹೋರಾಟ ಸಮಿತಿ ಸದಸ್ಯರಿಗೆ ಗೌರವ

ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸದಸ್ಯರಾದ ದಿನೇಶ್ ಭಟ್, ರಾಜೇಶ್‌ಕೃಷ್ಣ, ವೆಂಕಟ್ರಮಣ ಪುಣಚ, ಸಂಜೀವ ಕಬಕ, ಸಂದೀಪ್ ಲೋಬೊ, ದಿನೇಶ್ ಹೆಗ್ಡೆ, ಅಶೋಕ್ ಅಡ್ಯಂತಾಯ, ಡಾ. ಸಂದೀಪ್ ನಾಯಕ್, ಝೇವಿಯರ್ ಡಿಸೋಜ, ವಿಶ್ವಪ್ರಸಾದ್ ಸೇಡಿಯಾಪು, ಎಂ.ಬಿ.ವಿಶ್ವನಾಥ ರೈ, ಅಮಳ ರಾಮಚಂದ್ರ ಭಟ್, ಸೇಡಿಯಾಪು ಜನಾರ್ದನ ಭಟ್, ರಾಜೇಶ್ ಪ್ರೆಸ್‌ನ ರಘುನಾಥ ರಾವ್, ಉಲ್ಲಾಸ್ ಅವರನ್ನು ಗೌರವಿಸಲಾಯಿತು.