ಪುತ್ತೂರು: ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಅ.೧೮ ಮತ್ತು ೧೯ರಂದು ನಡೆಯಲಿರುವ ‘ವಿಜಯ ದಶಮಿ ಜೋಡುಕರೆ ಕಂಬಳ’ಕ್ಕೆ ಕೋಣಗಳ ಯಜಮಾನರನ್ನು ಆಹ್ವಾನಿಸುವ ಹಾಗೂ ಕೋಣಗಳ ನೋಂದಣಿ ಪ್ರಕ್ರಿಯೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಕಂಬಳದ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸರ್ಕಾರದಿಂದ ಬಂದಿರುವ ಕೋಣಗಳ ನೋಂದಣಿ ಅರ್ಜಿ ನಮೂನೆಯನ್ನು ದೇವರ ನಡೆಯಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರು ಪ್ರಾರ್ಥನೆ ನೆರವೇರಿಸಿದರು.
ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಅ.೧೬ರಂದು ಬೆಳಗ್ಗೆ ೧೦.೩೦ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಕಂಬಳದ ಕೋಣಗಳನ್ನು ಮೈಸೂರಿಗೆ ಕಳುಹಿಸಿಕೊಡುವ ಕಾರ್ಯಕ್ರಮ ನಡೆಯಲಿದೆ. ಕೋಣಗಳು ಮಡಿಕೇರಿಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಬಳಿಕ ಮೈಸೂರಿಗೆ ತೆರಳಲಿವೆ ಎಂದು ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ದಿನೇಶ್ ಪಿ.ವಿ., ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಸಂದೀಪ್ ಶೆಟ್ಟಿ ಸಿದ್ದಕಟ್ಟೆ ಪೊಡುಂಬ, ಕೋಣಗಳ ಯಜಮಾನ ಕೇಶವ ಭಂಡಾರಿ ಕೈಪ, ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿ ಉಪಾಧ್ಯಕ್ಷ ಸುದರ್ಶನ್ ಕಂಪ, ಮೈಸೂರು ಕಂಬಳದ ಉಸ್ತುವಾರಿ ಹಾಗೂ ಉಪ್ಪಿನಂಗಡಿ ಕಂಬಳ ಸಮಿತಿ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅರ್ಪಿಣಿ ಗುತ್ತು ಅಶೋಕ್ ರೈ, ವಸಂತ ಶೆಟ್ಟಿ ಕೇದಗೆ, ಸುದೇಶ್ ಶೆಟ್ಟಿ, ರೋಶನ್ ರೈ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.