ಪುತ್ತೂರಿನ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ಅಶೋಕ್ ಕುಮಾರ್ ರೈ, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಮೊದಲಾದವರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಕರ್ತವ್ಯಗಳ ಪಾಲನೆಯಿಂದ ದೇಶ ಅಭಿವೃದ್ಧಿ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್ ಕುಮಾರ್ ಪ್ರತಿಪಾದನೆ
  • ಪುತ್ತೂರು ತಾಲೂಕುಮಟ್ಟದ ಸ್ವಾತಂತ್ರ್ಯೋತ್ಸವ
ಪುತ್ತೂರು: ಸ್ವಾತಂತ್ರ್ಯದ ಬಳಿಕ ದೇಶ ಬಹಳಷ್ಟು ಅಭಿವೃದ್ಧಿಯಾಗಿದ್ದರೂ ಬೇರೆ ದೇಶಗಳಿಗೆ ಹೋಲಿಸಿದರೆ ನಾವು ೭೦ ವರ್ಷ ಹಿಂದೆ ಇದ್ದೇವೆ. ಪ್ರತಿಯೊಬ್ಬರೂ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಪುತ್ತೂರು ಮೆಡಿಕಲ್ ಹಬ್ ಆಗಿ ಪರಿವರ್ತನೆಯಾಗಿ ೨೫ ಸಾವಿರ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಈ ಮೂಲಕ ೧೨ ಸಾವಿರ ಮಂದಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಧರ್ಮಾಧಾರಿತ ವಿಚಾರಗಳಿಂದ ಸಮರ್ಪಕ ಉದ್ಯೋಗ ಲಭಿಸುತ್ತಿಲ್ಲ. ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಯುವ ಸಮುದಾಯಕ್ಕೆ ಉತ್ತಮ ಶಿಕ್ಷಣ ಸಿಕ್ಕಾಗ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಪುರಭವನದಲ್ಲಿ ತಾಲೂಕುಮಟ್ಟದ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಭಕ್ತ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್‌ಸಿಸಿ ಮತ್ತು ಎಸ್‌ಪಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಬ್ಯಾಂಡ್ ಸೆಟ್‌ನೊಂದಿಗೆ ಪಥಸಂಚಲನ ನಡೆಯಿತು.
ಸನ್ಮಾನ: ಇಂಡಿಯನ್ ನೇವಿ ನಿವೃತ್ತ ಚೀಫ್ ಪೆಟ್ಟಿ ಆಫೀಸರ್ ದಿವಾಕರ ರೈ ಬೊಳಿಕ್ಕಲ, ಇಂಡಿಯನ್ ಆರ್ಮಿ ರಮೇಶ್ ರೈ ಬೋಳೋಡಿ, ಹುತಾತ್ಮ ಯೋಧರ ಪತ್ನಿ ಸ್ವರ್ಣಲತಾ, ಜಯಶ್ರೀ ಭಟ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಲ ಸಂರಕ್ಷಣೆ ಕುರಿತ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಪಾಧೀಕ್ಷಕ ಪ್ರಮೋದ್ ಕುಮಾರ್, ಪೌರಾಯುಕ್ತೆ ವಿದ್ಯಾ ಎಂ.ಕಾಳೆ ಉಪಸ್ಥಿತರಿದ್ದರು. ತಹಸೀಲ್ದಾರ್ ಎಸ್.ಬಿ.ಕೂಡಲಗಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
"

ಕಿಲ್ಲೆ ಮೈದಾನ ಪುತ್ತೂರಿನ ಇತಿಹಾಸದ ಹಲವು ಅಧ್ಯಾಯಗಳಿಗೆ ಸಾಕ್ಷಿಯಾದ ನೆಲವಾಗಿದೆ. ದೇಶವನ್ನು ಬದಲಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ. ಸ್ವಚ್ಛತೆಗೆ ಆದ್ಯತೆ, ಸಂಚಾರ ನಿಯಮ ಪಾಲನೆ, ಸಾರ್ವಜನಿಕ ಆಸ್ತಿ ರಕ್ಷಣೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದಿರುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮೌಲ್ಯಗಳನ್ನು ನೀಡುವುದೇ ದೇಶ ಸೇವೆಯಾಗಿದೆ. ದೇಶಕ್ಕೆ ನಾವೇನು ನೀಡಬಹುದೆಂಬುದನ್ನು ಯೋಚಿಸಬೇಕು.

— ಸ್ಟೆಲ್ಲಾ ವರ್ಗೀಸ್, ಸಹಾಯಕ ಆಯುಕ್ತೆ