ಏಜೆನ್ಸಿಯ ಮುಂದು ಗ್ಯಾಸ್ ಸಿಲಿಂಡರ್ ಹಿಡಿದು ಸರತಿಯಲ್ಲಿ ನಿಂತಿರುವುದು.
- ಸಮರ್ಪಕ ಪೂರೈಕೆಗಿಲ್ಲ ಕ್ರಮ
- ‘ಗ್ಯಾಸ್ ಸಮಸ್ಯೆಯಿಲ್ಲ’ ಹೇಳಿಕೆಗೆ ಸೀಮಿತ
ಪುತ್ತೂರು: ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದ ಗೃಹಬಳಕೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ ಗ್ಯಾಸ್ ಏಜೆನ್ಸಿ ತಾಳಕ್ಕೆ ಕುಣಿಯುವ ಸ್ಥಿತಿ ನಾಗರಿಕರಿಗೆ ಬಂದೊದಗಿದೆ.
ಎರಡು ವಾರಗಳಿಂದ ಗ್ಯಾಸ್ ಏಜೆನ್ಸಿಯಿಂದ ಬಳಕೆದಾರರಿಗೆ ಸಮಸ್ಯೆಯಾಗುತ್ತಿದ್ದರೂ ಕ್ರಮ ಆಗುತ್ತಿಲ್ಲ. ಕಾಳಸಂತೆಯಲ್ಲಿ ಗ್ಯಾಸ್ ಮಾರಾಟದ ಮಾಹಿತಿ ನೀಡಿದರೂ, ದೂರು ಬಂದಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಹೇಳಿಕೆಗಳಲ್ಲಿ ಗೃಹಬಳಕೆ ಗ್ಯಾಸ್ ಪೂರೈಕೆಯಲ್ಲಿ ಕೊರತೆಯಿಲ್ಲ ಎಂದರೂ, ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎನ್ನುವುದು ಗ್ರಾಹಕರ ಆರೋಪ.
ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆಯಿರುವವರೂ ಏಜೆನ್ಸಿ ಮುಂದೆ ಗ್ಯಾಸ್ ಸಿಲಿಂಡರ್ ಹಿಡಿದು ನಿಲ್ಲುತ್ತಿದ್ದಾರೆ. ಕೆಲವು ಕಡೆ ಮುಖ್ಯ ಬಾಗಿಲು ಮುಚ್ಚಿ ಕಿಟಕಿ ಕಿಂಡಿಯಲ್ಲಿ ಮಾತ್ರ ವ್ಯವಹಾರ ನಡೆಸಲು ಮುಂದಾಗಿದ್ದಾರೆ. ಗ್ಯಾಸ್ ದಾಸ್ತಾನು ಇಲ್ಲದೆಯೂ ಒಟಿಪಿ ಬಿಲ್ಲಿಂಗ್ ನಡೆಸಿ, ಗ್ಯಾಸ್ ಪೂರೈಕೆ ಮಾಡುತ್ತಿಲ್ಲ.
ಜನಸ್ಪಂದನದಲ್ಲಿ ದೂರು
ಜನಸ್ಪಂದನ ಕುಂದುಕೊರತೆ ವಿಭಾಗದಲ್ಲಿ ಗ್ರಾಹಕರು ದೂರು ದಾಖಲಿಸಲಾರಂಭಿಸಿದ್ದಾರೆ. ಕೇಂದ್ರ ಸರ್ಕಾರ ಮೂಲಕ ಆಹಾರ ಸಂಸ್ಕರಣಾ ಘಟಕಕ್ಕೆ ಸಾಲ ಪಡೆದಿದ್ದು, ವಾಣಿಜ್ಯ ಬಳಕೆ ಗ್ಯಾಸ್ ಪೂರೈಕೆಯ ಸಮಸ್ಯೆಯಿಂದ ಸಾಲ ಮರುಪಾವತಿಗೆ ಸಮಸ್ಯೆಯಾಗುತ್ತಿದೆ. ಆಹಾರ ಇಲಾಖೆ ಅಽಕಾರಿಗಳು ದೂರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿ ಗ್ರಾಹಕರು ವಿವರಿಸಿದ್ದಾರೆ.
ಮಾ.೧೯ಕ್ಕೆ ಸಿಲಿಂಡರ್ ಬುಕ್ ಮಾಡಿದ್ದು, ಈವರೆಗೆ ಮನೆಗೆ ಸಿಲಿಂಡರ್ ಡೆಲಿವರಿ ಆಗಿಲ್ಲ. ಏಜೆನ್ಸಿಯ ಮುಂದೆ ಬೆಳಗ್ಗೆ ೯ ಗಂಟೆಗೆ ಬಂದು ಸರತಿಯಲ್ಲಿ ನಿಂತಿದ್ದೇವೆ.
ಮಾ.೨೨ರಂದು ಗ್ಯಾಸ್ ಬುಕ್ ಮಾಡಿದ್ದು, ಇದಕ್ಕೆ ಸಂಬಂಽಸಿದ ಬಿಲ್ಲಿನ ಒಟಿಪಿ ಈಗಾಗಲೇ ಬಂದಿದೆ. ಆದರೆ ಸಿಲಿಂಡರ್ ನೀಡುತ್ತಿಲ್ಲ. ವರ್ಷದ ಹಿಂದೆ ಕಾಲು ಶಸ್ತ್ರಚಿಕಿತ್ಸೆಯಾಗಿ ನಿಲ್ಲಲು ಆಗದ ಸ್ಥಿತಿಯಾಗಿದೆ. ನಾವು ಸಿಲಿಂಡರ್‌ಗೆ ಬಂದಾಗ ಸರತಿಯನ್ನೇ ಸೂಚಿಸುತ್ತಿದ್ದಾರೆ. ಮೂರು ದಿನಗಳಿಂದ ಆಗಮಿಸುತ್ತಿದ್ದು, ಸಿಲಿಂಡರ್ ನೀಡುತ್ತಿಲ್ಲ.
ಹಿಂದೆ ದಿನಕ್ಕೆ ಒಂದು ಲೋಡ್ ಸಿಲಿಂಡರ್ ಪೂರೈಕೆಯಾಗುತ್ತಿತ್ತು. ಮಾ.೧೯ಕ್ಕೆ ಒಂದು ಲೋಡು ಬಂದಿದ್ದು ಬಿಟ್ಟರೆ, ಮಾ.೩೦ರಂದು ಒಂದು ಲೋಡು ಬಂದಿದೆ. ಮಂಗಳೂರಿನಲ್ಲಿ ಲೋಡಿಂಗ್ ನೀಡುತ್ತಿಲ್ಲ. ಈ ಕಾರಣದಿಂದ ಗ್ರಾಹಕರ ಮನೆಗೂ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಸಭೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಪುತ್ತೂರಿನ ಗ್ಯಾಸ್ ಏಜೆನ್ಸಿಯೊಂದರಲ್ಲಿ ಆನ್‌ಲೈನ್ ಬುಕಿಂಗ್‌ಗೂ ಸಿಲಿಂಡರ್ ನೀಡುತ್ತಿಲ್ಲ. ಅಲ್ಲಿಗೆ ಸಿಲಿಂಡರ್ ಹೊತ್ತುಕೊಂಡು ಹೋಗಿ ರಸ್ತೆ ಬದಿಯಲ್ಲಿ ರಣಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಅಲ್ಲಿ ಕಚೇರಿ ಸಿಬ್ಬಂದಿ ಬಳಿ ಕೇಳಲು ಹೋದರೆ ಕಚೇರಿ ಬಾಗಿಲು ಹಾಕಿ, ಕಿಟಕಿಯಲ್ಲಿ ಕೈ ಚಾಚಬೇಕು. ವಯೋವೃದ್ಧರು, ಮಹಿಳೆಯರು ಪಡುತ್ತಿರುವ ಕಷ್ಟಕ್ಕೆ ಯಾರು ಹೊಣೆ?