ಪುತ್ತೂರು ದರ್ಬೆ ಜಂಕ್ಷನ್‌ನಲ್ಲಿ ಜಮಾಯಿಸಿದ್ದ ಜನರು. 
ದಕ್ಷಿಣ ಕನ್ನಡ

ಗುಂಪುಗಳ ಮಧ್ಯೆ ತಳ್ಳಾಟ, ಹಲ್ಲೆ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪೊಲೀಸರ ಕರ್ತವ್ಯಕ್ಕೆ ಅಡ್ಡಿ
  • ಲಘು ಲಾಠಿ ಪ್ರಹಾರ
ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಪತ್ರಕ್ಕೆ ಹಾನಿಯಾದ ವಿಚಾರದಲ್ಲಿ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಹಲ್ಲೆಗೈದ ಘಟನೆ ಶುಕ್ರವಾರ ನಡೆದಿದೆ. ವಿಚಾರ ತಿಳಿದು ಸ್ಥಳದಲ್ಲಿ ಜನರು ಗುಂಪು ಸೇರಿದ್ದು, ಪರಿಸ್ಥಿತಿ ನಿಯಂತ್ರಿಸಲು ನಗರ ಠಾಣೆ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.
ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬವರು ಪುತ್ತೂರು ದರ್ಬೆಯಲ್ಲಿನ ಅಂಜನಾ ಪೈ ಎಂಬುವರ ಡಿಜಿಟಲ್ ಸೇವಾ ಕೇಂದ್ರಕ್ಕೆ ತೆರಳಿ ಕೆಲವು ದಾಖಲಾತಿಗಳನ್ನು ಜೆರಾಕ್ಸ್ ಹಾಗೂ ಲ್ಯಾಮಿನೇಶನ್ ಮಾಡಲು ನೀಡಿದ್ದರು. ಲ್ಯಾಮಿನೇಶನ್ ಮಾಡುವಾಗ ತಾಂತ್ರಿಕ ದೋಷದಿಂದ ಜನನ ಪ್ರಮಾಣಪತ್ರದ ಮೂಲಪ್ರತಿ ಸುಟ್ಟುಹೋಗಿದೆ. ಈ ವಿಚಾರದಲ್ಲಿ ಮುಬಾಶಿರ, ಫಾತೀಮಾ, ಮುಬಾಶಿರ್ ಹಾಗೂ ಅಂಗಡಿಯ ಅಂಜನಾ ಪೈ, ಅವರ ಪುತ್ರ ಸುದರ್ಶನ್ ಪೈ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಅಂಗಡಿಯಲ್ಲಿದ್ದ ಸದಾಶಿವ ಪೈ ಅವರನ್ನು ಹೊರಗೆ ಎಳೆದಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ವಾಹನದಲ್ಲಿ ವಶಕ್ಕೆ ಪಡೆದು ಕೂರಿಸಿದ ವ್ಯಕ್ತಿಯ ಮೇಲೂ ಹಲ್ಲೆಗೆ ಯತ್ನ ನಡೆದಿದ್ದು, ಬಿಡಿಸುವ ವೇಳೆ ತಳ್ಳಾಟ ನಡೆದಿದೆ. ಬಳಿಕ ಸ್ಥಳದಲ್ಲಿ ಸೇರಿದ್ದ ಜನರಿಗೆ ತೆರಳಲು ಸೂಚಿಸಿದ್ದು, ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.

ಪೊಲೀಸರ ತಡೆ:

ಈ ವೇಳೆ ಸ್ಥಳದಲ್ಲಿ ಜನರು ಗುಂಪು ಸೇರಿದ್ದು, ನಗರ ಠಾಣೆ ಪೊಲೀಸರು ಘಟನೆ ಮಾಹಿತಿ ಪಡೆದು ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದಾರೆ. ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಅಲ್ಲಿ ಸೇರಿದ್ದ ಕೆಲವರು ಪೊಲೀಸರಿಗೆ ತಡೆಯೊಡ್ಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿ ದೂರು ದಾಖಲಾಗುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಘಟನೆ ನಡೆದ ಅಂಗಡಿಯ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಸುಳ್ಳು ವದಂತಿ ಪ್ರಸಾರ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.