ಪುತ್ತೂರು, ಕಡಬ ತಾಲೂಕುಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆಗಳ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿದರು. ಅನಿಲ್ ಕುಮಾರ್ ಭೂಮರೆಡ್ಡಿ, ಪ್ರಮೋದ್ ಕುಮಾರ್, ಸಿ.ಕೆ.ರೋಹಿಣಿ, ಬಿ.ಎಸ್.ಕೂಡಲಗಿ, ಗಣೇಶ, ನವೀನ್ ಭಂಡಾರಿ ಉಪಸ್ಥಿತರಿದ್ದರು.
- ಡಿಸಿ ದರ್ಶನ್ ಸೂಚನೆ
- ಪುತ್ತೂರು, ಕಡಬ ತಾಲೂಕುಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ
ಪುತ್ತೂರು: ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಸಮೀಕ್ಷೆ ನಡೆಸುವವರಿಗೆ ಸಂಪರ್ಕ ವಿವವರಗಳನ್ನು ಪ್ರದರ್ಶಿಸಬೇಕು. ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಆಧಾರಿತವಾಗಿಯೇ ನಡೆಸಬೇಕು. ಗೋಮಾಳ ಜಾಗ ಗೋವುಗಳಿಗೆ ಮಾತ್ರ ಮೀಸಲಾಗಿದ್ದು ಅಲ್ಲಿ ಅನ್ಯ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಹೊಟೇಲ್‌ಗಳು ಕೊಳಚೆ ನೀರನ್ನು ಚರಂಡಿಗೆ ಬಿಡದೆ ಪಿಟ್ ನಿರ್ಮಿಸಿ ಬಿಡಬೇಕು. ಚರಂಡಿಗೆ ಬಿಟ್ಟರೆ ಅಂತಹ ಹೊಟೇಲ್‌ಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪುತ್ತೂರು, ಕಡಬ ತಾಲೂಕುಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ ವಿಚಾರದಲ್ಲಿ ನಿಷೇಧಿತ ಪದಗಳನ್ನು ಬಳಸದಂತೆ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗುವುದು. ಸೂಕ್ತ ಜಾಗ ಗುರುತಿಸಿದರೆ ವಿವಿಧ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ೫೦ ಸಾವಿರ ಕುಟುಂಬಕ್ಕೆ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗಗಳ ಪ್ರದೇಶಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು.
ಎನ್‌ಒಸಿ ಸಿಗದೆ ಸಮಸ್ಯೆ: ರಿಕ್ಷಾ ಪರವಾನಗಿ ನವೀಕರಣಕ್ಕೆ ಬ್ಯಾಂಕ್‌ಗಳು ಎನ್‌ಒಸಿ ನೀಡುತ್ತಿಲ್ಲ. ಸಾಲ ಸಂಪೂರ್ಣ ಪಾವತಿ ಮಾಡಿದರೂ ಜಾಮೀನುದಾರರೆಂಬ ಕಾರಣವನ್ನು ನೀಡುತ್ತಿದ್ದಾರೆ ಎಂದು ಪ್ರಮೋದ್ ಹೇಳಿದರು. ವಾಮನ ಮಾತನಾಡಿ, ಜಾತಿ ಪ್ರಮಾಣಪತ್ರಕ್ಕಾಗಿ ಪ್ರತಿಯೊಬ್ಬರಿಗೆ ೨೦೦ರಿಂದ ೨೫೦ ರೂ. ಆಗುತ್ತದೆ. ಕಂದಾಯ ಕಚೇರಿಯಲ್ಲಿ ಕೆಲಸ ಕಾರ್ಯಗಳಿಗೆ ದಿನವಿಡೀ ಕಾಯುವಂತಹ ಸ್ಥಿತಿ ಇದೆ ಎಂದರು. ಬನ್ನೂರು ಅಂಬೇಡ್ಕರ್ ಭವನ ನಿರ್ಮಾಣ ಜಾಗದ ತಕರಾರು ಇತ್ಯರ್ಥಗೊಳಿಸಿ ತ್ವರಿತವಾಗಿ ಸಭಾಭವನ ನಿರ್ಮಿಸಬೇಕು ಎಂದು ಬಾಬು ಮರಿಕೆ ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಪುತ್ತೂರು ಪೊಲೀಸ್ ಉಪ ಅಧೀಕ್ಷಕ ಪ್ರಮೋದ್ ಕುಮಾರ್, ಬೆಳ್ತಂಗಡಿ ಪೊಲೀಸ್ ಉಪ ಅಧೀಕ್ಷಕಿ ಸಿ.ಕೆ.ರೋಹಿಣಿ, ಪುತ್ತೂರು ತಹಸೀಲ್ದಾರ್ ಬಿ.ಎಸ್.ಕೂಡಲಗಿ, ಕಡಬ ತಹಸೀಲ್ದಾರ್ ಗಣೇಶ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.
ಸಮಯ ಬದಲಾವಣೆಗೆ ಗರಂ
ಸಭೆಗೆ ಆಮಂತ್ರಿಸುವಾಗ ೧೧ ಗಂಟೆಗೆ ಎಂದು ಹೇಳಿ ಅರ್ಧ ಗಂಟೆ ತಡವಾದರೂ ಸಭೆ ನಡೆಸಬೇಕಾದ ಅಽಕಾರಿಗಳು ಇನ್ನೂ ಸಭಾಂಗಣದ ಒಳಗೆ ಬಂದಿಲ್ಲ. ಸಭೆಯ ಸಮಯವನ್ನು ಸ್ಕ್ರೀನ್‌ನಲ್ಲಿ ೧೧.೩೦ ಎಂದು ಬದಲಾಯಿಸುತ್ತಿದ್ದಂತೆ ಗರಂ ಆದ ಸಮುದಾಯದ ಪ್ರಮುಖರು ಸಮಯವನ್ನು ನಿಮಗೆ ಬೇಕಾದಂತೆ ಬದಲಾವಣೆ ಮಾಡುವುದಾದರೆ ನಮ್ಮನ್ನು ಯಾಕೆ ಬೇಗ ಕರೆಸಬೇಕು ಎಂದು ಪ್ರಶ್ನಿಸಿದರು. ಬಳಿಕ ಸಮಯವನ್ನು ೧೧ ಎಂದು ಮಾಡಲಾಯಿತು.
ವಿವಿಧ ಬೇಡಿಕೆಗಳು
ಏಜೆಂಟ್‌ಗಳು ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸದೆ ಬೆಳೆಗಾರರು ವಂಚಿತವಾಗುತ್ತಿದ್ದಾರೆ. ಸರ್ವೇ ನಂಬರ್‌ಗಳು ಸಮರ್ಪಕವಾಗಿ ಸಿಗದೆ ಸಮೀಕ್ಷೆ ಕಾರ್ಯ ನಡೆಯುತ್ತಿಲ್ಲ. ಸಮುದಾಯದವರ ಮನೆಗಳಿಗೆ ಹೋಗುವ ದಾರಿಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಉಪ್ಪಿನಂಗಡಿ ಸರ್ಕಾರಿ ಶಾಲೆಯ ಹಿಂಭಾಗ ಕೊಳಚೆ ನೀರು ಹರಿಯುತ್ತಿದ್ದು ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಕ್ರಮ-ಸಕ್ರಮಕ್ಕೆ ಹಲವು ವರ್ಷಗಳ ಹಿಂದೆ ಅರ್ಜಿ ನೀಡಲಾಗಿದ್ದು, ನಗರಸಭೆಯ ವ್ಯಾಪ್ತಿಯನ್ನು ಹೇಳಿ ಜಾಗ ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೃಷಿ ಕೂಲಿಕಾರರಿಗೂ ನೀಡಬೇಕು ಮತ್ತಿತರರ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಆದಿ ದ್ರಾವಿಡ ಜಾತಿ ವಿಚಾರದಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಬನ್ನೂರು ಅಂಬೇಡ್ಕರ್ ಭವನ ಜಾಗದ ತಕರಾರು ನ್ಯಾಯಾಲಯದಲ್ಲಿದ್ದು ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಗ್ರಾಮಗಳ ಸಂಪರ್ಕ ರಸ್ತೆಗೆ ಅಡೆತಡೆ ಮಾಡುತ್ತಿದ್ದರೆ, ಕಾನೂನು ಬದ್ಧವಾಗಿ ತೆರವು ಮಾಡಬೇಕು.
— ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ