ಕಾಂಕ್ರೀಟ್ ಕಾಮಗಾರಿಗೆ ಅಳವಡಿಸಿದ ಹಲಗೆಗಳ ನಡುವೆ ರಟ್ಟುಗಳನ್ನು ಇಟ್ಟಿರುವುದು.  
ದಕ್ಷಿಣ ಕನ್ನಡ

ಹಲಗೆ-ಕಬ್ಬಿಣಗಳ ಸಂಧಿನ ಗುಟ್ಟು‘ರಟ್ಟು’! Puttur

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪುಡಾ ಕಾಮಗಾರಿಯಲ್ಲಿ ಎಡವಟ್ಟು
  • ಪರಿಶೀಲಿಸುವ ಗೋಜಿಗೆ ಹೋಗದ ಅಧಿಕಾರಿಗಳು
ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ನಡೆಯುತ್ತಿರುವ ಚರಂಡಿ ಅಭಿವೃದ್ಧಿ ಕಾಂಕ್ರೀಟ್ ಕಾಮಗಾರಿ ಕಳಪೆಯಿಂದ ಕೂಡಿರುವುದು ಬೆಳಕಿಗೆ ಬಂದಿದೆ. ಚರಂಡಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರ ಹಲಗೆ ಸಂಧಿಗಳ ನಡುವಿನ ಜಾಗವನ್ನು ಸರಿಪಡಿಸಲು ರಟ್ಟುಗಳ (ಕಾರ್ಡ್‌ಬೋರ್ಡ್) ತುಂಡುಗಳನ್ನು ಇಟ್ಟು ಕಾಮಗಾರಿ ಮುಂದುವರಿಸಿದ್ದರೂ ನಗರಸಭೆಯ ಅಧಿಕಾರಿ ವರ್ಗ ಇದನ್ನು ಪರಿಶೀಲಿಸಿ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಪುತ್ತೂರು ನಗರ ಯೋಜನಾ ಪ್ರಾಽಕಾರ (ಪುಡಾ)ದ ೫೦ ಲಕ್ಷ ರೂ. ಅನುದಾನದಲ್ಲಿ ಮಯೂರ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪೇಟೆಯಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ನಿವಾರಿಸಿ ವಾಹನ ಸಂಚಾರ ಸುಗಮ ಮಾಡುವ ಉದ್ದೇಶ ಹೊಂದಲಾಗಿದೆ. ಗುಣಮಟ್ಟ ಕೊರತೆ: ಹಲಗೆ ಹಾಗೂ ಕಬ್ಬಿಣದ ಸರಳಿನ ನಡುವೆ ನಿಗದಿತ ಜಾಗ ಬಿಟ್ಟರೆ ಕಾಮಗಾರಿಯ ಗುಣಮಟ್ಟ ಹೆಚ್ಚುತ್ತದೆ. ಆದರೆ ಗುತ್ತಿಗೆದಾರ ತನ್ನ ಸುಲಭಕ್ಕೆ ಬೇಕಾದಂತೆ ಅಳವಡಿಸಿದ್ದಾರೆ. ಇದನ್ನು ಗಮನಿಸಿ ಸರಿಪಡಿಸುವ ಕಾರ್ಯ ಇಂಜಿನಿಯರಿಂಗ್ ವಿಭಾಗದಿಂದ ನಡೆಯಬೇಕಾಗಿದೆ. ಸರಿಪಡಿಸಬೇಕಾದ ಅಧಿಕಾರಿಗಳು ಇತ್ತ ಸುಳಿಯದೆ, ದಾಖಲೆಗಳಲ್ಲಿ ಗುಣಮಟ್ಟದ ಕಾಮಗಾರಿಯೆಂದು ನಮೂದಿಸುತ್ತಿರುವುದು ದುರಂತವಾಗಿದೆ.
ಕಾಂಕ್ರೀಟ್‌ಗೆ ಬಲ ನೀಡುವಂತೆ ಅಳವಡಿಸುವ ಮರದ ಹಲಗೆ ನಡುವೆ ಸೆರೆ ಇದ್ದಲ್ಲಿ ಕಾಂಕ್ರೀಟ್ ಸೋರಿಕೆಯಾಗಿ ಕಾಮಗಾರಿ ಗುಣಮಟ್ಟದಿಂದ ಕೂಡಿರುವುದಿಲ್ಲ. ಇಂತಹ ಸಮಸ್ಯೆಯನ್ನು ಪುಡಾ ಪ್ರತಿನಿಧಿಗಳು ತೋರಿಸಿದಾಗ ಗುತ್ತಿಗೆದಾರ ಸಂಧಿಗಳಿಗೆ ರಟ್ಟುಗಳನ್ನು ಇಟ್ಟು ಕಾಮಗಾರಿ ಮುಂದುವರಿಸಿದ್ದು, ನಗರಸಭೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಕೆಲವು ದಿನದ ಹಿಂದೆ ಭೇಟಿ!

ಕಾಮಗಾರಿ ಸ್ಥಳಕ್ಕೆ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ದಿಢೀರ್ ಭೇಟಿ ನೀಡಿ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ್ದರು. ಕಬ್ಬಿಣ ಕಟ್ಟದೆ ಕಾಂಕ್ರೀಟ್ ಹಾಕಲು ಮುಂದಾಗಿರುವುದನ್ನು ಗಮನಿಸಿ ಕಾಮಗಾರಿ ಸರಿಯಾಗಿ ಮಾಡುವಂತೆ ಎಚ್ಚರಿಸಿದ್ದರು. ಇಷ್ಟಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ನೈಜತೆಯನ್ನು ಪರಿಶೀಲಿಸದಿರುವುದು ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
"

ಕಾಮಗಾರಿ ನಡೆಯುವ ಸ್ಥಳಕ್ಕೆ ಒಮ್ಮೆಯಾದರೂ ಅಽಕಾರಿ ವರ್ಗ ತೆರಳಿ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಸೂಚನೆ ನೀಡುವುದರಿಂದ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತದೆ. ಸ್ಥಳಕ್ಕೆ ಒಮ್ಮೆಯೂ ತೆರಳದಿದ್ದರೆ, ಒಂದು ಕಾಮಗಾರಿಯನ್ನು ಮೂರು ನಾಲ್ಕು ಬಾರಿ ಮಾಡುವಂತಾಗುತ್ತದೆ. ಅಧಿಕಾರಿ ವರ್ಗ ಕೆಲಸದಲ್ಲಿ ಮೈಗಳ್ಳತನ ದೂರ ಮಾಡಬೇಕು.

"

ಕಾಂಕ್ರೀಟ್ ಕಾಮಗಾರಿ ಪರಿಶೀಲನೆಗಾಗಿ ಸ್ಥಳಕ್ಕೆ ಹೋದಾಗ ಮರದ ಹಲಗೆಗಳ ಮಧ್ಯೆ ಇರುವ ಅಂತರವನ್ನು ರಟ್ಟುಗಳ ಚೂರುಗಳನ್ನು ಇಟ್ಟು ಮುಚ್ಚಿರುವುದು ಗಮನಕ್ಕೆ ಬಂದಿದೆ. ರಟ್ಟುಗಳನ್ನು ತೆಗೆದು ಕಬ್ಬಿಣ ಶೀಟ್ ಅಳವಡಿಸಿ ಕಾಮಗಾರಿ ಮುಂದುರಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.