ಪುತ್ತೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಎಂದಿನಂತಿದ್ದ ಪ್ರಯಾಣಿಕರು 
ದಕ್ಷಿಣ ಕನ್ನಡ

ಪುತ್ತೂರು ಬಂದ್‌ಗೆ ನೀರಸ ಪ್ರತಿಕ್ರಿಯೆ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ವಾಹನ ಸಂಚಾರ, ಜನಜೀವನ ಯಥಾಸ್ಥಿತಿ
  • ಪೊಲೀಸ್ ಬಿಗಿ ಬಂದೋಬಸ್ತ್
ಪುತ್ತೂರು: ದರ್ಬೆ ಗಲಾಟೆ ಪ್ರಕರಣ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಮಂಗಳವಾರ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನಜೀವನ ಎಂದಿನಂತಿತ್ತು. 
ವಾಹನಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಖಾಸಗಿ, ಸರ್ಕಾರಿ ಬಸ್‌ಗಳು ಎಂದಿನಂತೆ ಸಂಚರಿಸಿದ್ದವು. ಕೆಲವು ಅಂಗಡಿಗಳ ಮಾಲೀಕರು ಬಾಗಿಲು ತೆರೆಯಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಪೊಲೀಸ್ ವಾಹನಗಳ ಓಡಾಟ ನಿರಂತರವಾಗಿದ್ದು, ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.
ಪೇಟೆಯಲ್ಲಿ ಶೇ.೫೦ರಷ್ಟು ಅಂಗಡಿಗಳು ಮುಸ್ಲಿಂ ಸಮುದಾಯದವರಿಗೆ ಸೇರಿರುವುದರಿಂದ ಈದ್ ಹಬ್ಬದ ಪ್ರಯುಕ್ತ ಬಂದ್ ಮಾಡಿದ್ದರು. ಶಾಲಾ- ಕಾಲೇಜು ಸಹಿತ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದುದರಿಂದ ಜನಸಂಚಾರ ಎಂದಿಗಿಂತ ಕಡಿಮೆಯಿತ್ತು. 

ಐಜಿಪಿ, ಎಸ್‌ಪಿ ಮೊಕ್ಕಾಂ

ಬಂದ್ ಕರೆ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿ ಡಾ.ಅರುಣ್ ಕೆ. ಪುತ್ತೂರಿನಲ್ಲಿ ಮೊಕ್ಕಾಂ ಮಾಡಿ ಅಗತ್ಯ ಮಾರ್ಗದರ್ಶನ ನೀಡಿದರು. ಪುತ್ತೂರು ಉಪಾಧೀಕ್ಷಕ ಪ್ರಮೋದ್ ಕುಮಾರ್, ನಿರೀಕ್ಷಕರಾದ ಜಾನ್ಸನ್ ಡಿಸೋಜ, ಸುನೀಲ್ ಕುಮಾರ್ ಅಗತ್ಯ ಮಾಹಿತಿ ನೀಡಿದರು.
"

ಪುತ್ತೂರಿನಲ್ಲಿ ಒತ್ತಾಯಪೂರ್ವಕ ಬಂದ್ ಆಗಿಲ್ಲ. ಕೆಲವರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದರ್ಬೆ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಎಲ್ಲರನ್ನೂ ಒಂದೇ ರೀತಿ ನೋಡುತ್ತೇವೆ.

— ಡಾ.ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಚೋದನಕಾರಿ ಸಂದೇಶ

ಪುತ್ತೂರು: ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವ ಹಾಗೂ ಪ್ರಚೋದನಕಾರಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ಯಾಪ್‌ನಲ್ಲಿ ಮಂಜುನಾಥ್ ಎಂಬ ಹೆಸರಿನ ಖಾತೆ ಮೂಲಕ ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ ಪುತ್ತೂರು ಬಂದ್‌ಗೆ ಸವಾಲು ಹಾಕುವಂತಹ ಪ್ರಚೋದನಕಾರಿ ಹಾಗೂ ಸಾರ್ವಜನಿಕ ಶಾಂತಿ ಕದಡುವ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದು ಕಂಡುಬಂದಿದೆ. ಖಾತೆದಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.