ಜನಮನ ದೀಪಾವಳಿ ಉಡುಗೊರೆ ಹಂಚುವ ಕಾರ್ಯವನ್ನು ರೈ ಎಸ್ಟೇಟ್‌ನ ಗಿರಿಜಾ ಎಸ್ ರೈ ಉದ್ಘಾಟಿಸಿದರು. ಅಶೋಕ್ ಕುಮಾರ್ ರೈ, ಸುಮಾ ಅಶೋಕ್ ಕುಮಾರ್, ಸೀತಾರಾಮ ರೈ ಸವಣೂರು ಮತ್ತಿತರರಿದ್ದರು. puttur ashok janamana
ದಕ್ಷಿಣ ಕನ್ನಡ

ಜನಮನಕ್ಕೆ ಹರಿದು ಬಂದ ಜನಸಾಗರ PUTTUR

ಲಕ್ಷಕ್ಕೂ ಅಧಿಕ ಮಂದಿಯ ಭಾಗವಹಿಸುವಿಕೆ | ವಸ, ದಿನಬಳಕೆಯ ಪಾತ್ರೆಪಗಡಿ ವಿತರಣೆ | ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ದೀಪಾವಳಿ ಆಚರಣೆ

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ನಡೆದ ವಸ್ತ್ರ ವಿತರಣೆ ಕಾರ್ಯಕ್ರಮ ’ಅಶೋಕ ಜನಮನ-೨೦೨೬’ಕ್ಕೆ ಬೆಳಗ್ಗಿನಿಂದಲೇ ಜನಸಾಗರ ಹರಿದು ಬಂದಿದ್ದು, ಲಕ್ಷಕ್ಕೂ ಮಿಕ್ಕಿ ಜನರು ಭಾಗವಹಿಸಿದರು. ಸ್ವಯಂಸೇವಕರ ನಿರಂತರ ಶ್ರಮದಿಂದ ಅಚ್ಚುಕಟ್ಟಿನ ವ್ಯವಸ್ಥೆಯ ಮೂಲಕ ದಾಖಲೆ ನಿರ್ಮಾಣವಾಯಿತು.

ಗಿರಿಜಾ ಎಸ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮಿಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಜೆ.ಬಿ.ಸಲ್ದಾನ, ಗಡಿಯಾರ ಮುಸ್ತಾಫ್ ದಾರುಲ್ ಕಾರ್ಯದರ್ಶಿ ಮೆಹರೂಫ್ ಸುಲ್ತಾನ್ ಅಲ್ ಫುರ್ಕಾನಿ ಆಶೀರ್ವಚನ ನೀಡಿದರು. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.

ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಪಿ.ವಿ.ಮೋಹನ್, ಸುಮಾ ಅಶೋಕ್ ಕುಮಾರ್ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೇಟ್ ಪಿಂಟೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಕೋಟಿ-ಚನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ ಬಿ.ಕೆ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸಿಫ್, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಾಧಾಕೃಷ್ಣ ನಾಕ್ ಉಪ್ಪಿನಂಗಡಿ, ಮಹಿಳಾ ಕಾಂಗ್ರೆಸ್‌ನ ಉಷಾ ಅಂಚನ್, ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್.ಶೆಟ್ಟಿ ಸ್ವಾಗತಿಸಿದರು. ನಿಹಾಲ್ ಪಿ. ಶೆಟ್ಟಿ ವಂದಿಸಿದರು. ಮಹಮ್ಮದ್ ಬಡಗನ್ನೂರು, ಮನ್ಮಥ ಶೆಟ್ಟಿ, ಬಾಲಕೃಷ್ಣ ಪೊರ್ದಾಳ ನಿರೂಪಿಸಿದರು.

೧.೫ ಲಕ್ಷ ಮಂದಿಗೆ ದೋಸೆ

ಈ ಬಾರಿ ೧.೨೦ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಮಧ್ಯಾಹ್ನದ ಊಟದಲ್ಲಿ ೬೦ ಸಾವಿರ ಮಂದಿ ಪಾಲ್ಗೊಂಡಿದ್ದು, ೧.೫ ಲಕ್ಷಕ್ಕೂ ಅಧಿಕ ದೋಸೆಯನ್ನು ಮಾಡಲಾಗಿದೆ. ದೋಸೆಯನ್ನು ಬೆಳಗ್ಗೆ ೮ರಿಂದ ರಾತ್ರಿ ೮ರ ತನಕ ನೀಡಲಾಗಿದೆ.

ಗೂಡುದೀಪ ಸ್ಪರ್ಧೆ ಫಲಿತಾಂಶ

ಜೂನಿಯರ್ ವಿಭಾಗದಲ್ಲಿ ಜಿತೇಶ್ ರೈ ಪ್ರಥಮ, ಜಿತೇಶ್ ಎಂ. ದ್ವಿತೀಯ, ಯಕ್ಷಿತ್ ತೃತೀಯ, ಸೀನಿಯರ್ ವಿಭಾಗದಲ್ಲಿ ಉಮೇಶ್ ಕಾವು ಪ್ರಥಮ, ತುಡರ್ -ಂಡ್ಸ್ ಬಂಟ್ವಾಳ ದ್ವಿತೀಯ, ರಕ್ಷಿತ್ ಕುಮಾರ್ ಮಂಗಳೂರು ತೃತೀಯ ಬಹುಮಾನ ಗಳಿಸಿದರು.

ಸಾಧಕರಿಗೆ ಸನ್ಮಾನ

ಸಂಜೀವ ಕಬಕ, ಸುಬ್ಬಣ್ಣ ಪಂಡಿತ್, ಕೆ.ಫಝಲ್ ಹಕ್, ಗೀತಾ ಜಿ.ಎ., ಝಬೈರ್, ಮಹಾಬಲ ಶೆಟ್ಟಿ, ಮಹಮ್ಮದ್ ಆಲಿ, ಜಗನ್ನಾಥ ರೈ, ಸುಶೀಲ ದಿನೇಶ್, ಅಬ್ದುಲ್ ಖಾದರ್, ಸದಾಶಿವ, ನೌಷದ್ ಹಾಜಿ ಅವರನ್ನು ಸನ್ಮಾನಿಸಲಾಯಿತು.

ಅಚ್ಚುಕಟ್ಟು ವ್ಯವಸ್ಥೆ

ವಸ್ತ್ರ ಹಾಗೂ ಮನೆ ಉಪಯೋಗಿ ವಸ್ತುಗಳ ವಿತರಣೆಗೆ ಜನದಟ್ಟಣೆಯಾಗದಂತೆ ಕೌಂಟರ್ ವ್ಯವಸ್ಥೆ, ಜನ ಸಾಲಾಗಿ ಸಾಗುವುದಕ್ಕೆ ಬ್ಯಾರಿಕೇಡ್ ಅಳವಡಿಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಧ್ಯಾಹ್ನ ಊಟಕ್ಕೆ, ಸಂಜೆ ದೋಸೆ ಮೇಳಕ್ಕೆ ಕೌಂಟರ್ ವ್ಯವಸ್ಥೆಯನ್ನು ಹಾಕುವ ಮೂಲಕ ನೂಕುನುಗ್ಗಲಿಗೆ ಅವಕಾಶವಿಲ್ಲದಂತೆ ಮಾಡಲಾಗಿತ್ತು.

ಉಡುಗೊರೆ ಹಂಚಿಕೆ

ಮೂರು ವಿಭಾಗದಲ್ಲಿ ಉಡುಗೊರೆ ಹಂಚುವ ಕಾರ್ಯ ನಡೆದಿದ್ದು, ಜನರಿಗೆ ಬೇಕಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಎಲ್ಲರಿಗೂ ಪ್ರಯೋಜನ ಸಿಗಬೇಕೆಂಬ ನಿಟ್ಟಿನಲ್ಲಿ ಹೆಬ್ಬೆರಳಿಗೆ ಮಾರ್ಕ್ ಮಾಡಲಾಯಿತು. ಒಂದು ವಿಭಾಗದಲ್ಲಿ ಸೀರೆ, ಎರಡನೇ ವಿಭಾಗದಲ್ಲಿ ಬೆಡ್‌ಶೀಟ್, ಮೂರನೇ ವಿಭಾಗದಲ್ಲಿ ಬಟ್ಟಲು, ಪ್ಲೇಟ್, ಪಿಂಗಾಣಿ, ಗ್ಲಾಸ್, ಬಾತ್ ಟವಲ್ ನೀಡಲಾಯಿತು.

ಧರ್ಮಶ್ರದ್ಧೆಯ ಒಟ್ಟಿಗೆ ರಾಜಕೀಯ ನಡೆಸಿದ ಅಶೋಕ್ ಕುಮಾರ್ ರೈ ಜನಮನ ಗೆದ್ದ ನಾಯಕ. ಕಟ್ಟಕಡೆಯ ವ್ಯಕ್ತಿಗೆ ಸೇವೆ ತಲುಪಿದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯ.
ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ
ವ್ಯಕ್ತಿಯ ಪದವಿಗಿಂತ ಜೀವನದಲ್ಲಿ ಮಾಡುವ ಕಾರ್ಯ ಮುಖ್ಯವಾಗಿದೆ. ಎಲ್ಲ ಉದ್ಯೋಗಿಗಳಿಗೆ ನಿವೃತ್ತಿಯಿದ್ದರೆ, ಜನಸೇವೆ ಮಾಡುವರಿಗೆ ಜೀವನಪೂರ್ತಿ ಅವಕಾಶವಿದೆ.
ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶ್ರೀ ಸಾಂದೀಪನಿ ಸಾಧನಾಶ್ರಮ, ಕೇಮಾರು
ಉದ್ದೇಶ ಒಳ್ಳೆಯದಿದ್ದರೆ, ಸತ್ಕರ್ಮ ಮನೋಭಾವಕ್ಕೆ ಭಗವಂತನ ಅನುಗ್ರಹವಿರುತ್ತದೆ. ಒಳ್ಳೆಯ ಕಾರ್ಯಗಳು ವಿಶ್ವಶಾಂತಿಯೆಡೆಗೆ ಕೊಂಡೊಯ್ಯುವ ಕಾರ್ಯ ಮಾಡುತ್ತದೆ.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ, ಮಾಣಿಲ
ದೇವರ ಭಕ್ತಿ ಹಾಗೂ ಜನರ ಪ್ರೀತಿ ಒಟ್ಟಾಗಿ ಹೋಗಬೇಕು. ಜನರ ಸೇವೆ ಮಾಡಲು ದೇವರ ಭಕ್ತಿ ಮುಖ್ಯ. ಜನರ ಜತೆಗೆ ಬೆರತಾಗ ವಿಶ್ವಾಸವನ್ನು ಸಾಧಿಸಬಹುದು.
ಜಿ.ಬಿ. ಸಲ್ದಾನ, ಧರ್ಮಗುರು, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆ
ಜಾತಿ,ಧರ್ಮ, ಪಕ್ಷ ನೋಡದೆ ಎಲ್ಲರಿಗೂ ವ್ಯವಸ್ಥೆ ಕಲ್ಪಿಸಿದ್ದಾರೆ. ಅಶೋಕ್ ಕುಮಾರ್ ರೈ ಮೆಡಿಕಲ್ ಕಾಲೇಜಿನಂತಹ ದೊಡ್ಡ ಯೋಜನೆಯನ್ನು ಕ್ಷೇತ್ರಕ್ಕೆ ತರಿಸಿದ್ದು, ಸಚಿವರಾದರೆ ಅವರಿಂದ ನ್ನಷ್ಟು ಅಭಿವೃದ್ಧಿ ಸಾಧ್ಯ.
ಮೆಹರೂಫ್ ಸುಲ್ತಾನ್ ಅಲ್ ಫುರ್ಕಾನಿ, ಕಾರ್ಯದರ್ಶಿ, ಮುಸ್ತಾಫ್ ದಾರುಲ್ ಗಡಿಯಾರ
ಜನಸಾಮಾನ್ಯರ ಸೇವೆ ಮಾಡುವುದಕ್ಕೆ ರಾಜಕೀಯದಲ್ಲಿರಬೇಕು. ಜನರ ಬದುಕು ಬದಲಾಯಿಸುವುದು ನಿಜವಾದ ರಾಜಕಾರಣ. ಜನಸಾಮಾನ್ಯರ ಬದುಕು ಕೊಡುವ ಕೆಲಸ ರಾಜಕಾರಣದಿಂದ ಮಾಡಬೇಕು.
ಬಿ.ಕೆ. ಹರಿಪ್ರಸಾದ್, ಅಧ್ಯಕ್ಷ, ಕೆಪಿಸಿಸಿ
ದೀಪಾವಳಿಯ ಸಮಯ ೨೫ ಮಂದಿಯಿಂದ ಪ್ರಾರಂಭವಾದ ಸೀರೆ ಹಂಚಿಕೆ ಇಂದು ಲಕ್ಷ ಮಂದಿಯನ್ನು ದಾಟಿದೆ. ೧೦ ಮಂದಿಗೆ ಐಎಎಸ್, ಐಪಿಎಸ್ ಕಲಿಸುವ ಕಾರ್ಯ ಮಾಡಲಾಗುತ್ತಿದೆ. ಟೀಕಿಸುವವರಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡಲಾಗಿದೆ.
ಅಶೋಕ್ ಕುಮಾರ್ ರೈ, ಶಾಸಕರು