ರಾಜ್ಯ ಸಹಕಾರ ಮಹಾಮಂಡಳಿಯ ಆಡಳಿತ ಮಂಡಳಿಗೆ ದ.ಕ. ಜಿಲ್ಲೆಯಿಂದ ಪ್ರಥಮ ಬಾರಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಕೆ.ಸೀತಾರಾಮ ರೈ ಸವಣೂರು ಸನ್ಮಾನಿಸಿದರು. ಕುಶಾಲಪ್ಪ ಗೌಡ ಪಿ., ಚಿಕ್ಕಪ್ಪ ನಾಕ್, ಎನ್.ಸಂದರ್ ರೈ ಸವಣೂರು ಮತ್ತಿತರರು ಇದ್ದರು.
ದಕ್ಷಿಣ ಕನ್ನಡ

ಸಂಸ್ಥೆಯನ್ನು ಲಾಭದತ್ತ ಮುನ್ನಡೆಸಿದ ಕೀರ್ತಿ PUTTUR

ಸೀತಾರಾಮ ರೈ ಶ್ಲಾಘನೆ | ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈಗೆ ಸನ್ಮಾನ

ಪುತ್ತೂರು: ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಶಶಿಕುಮಾರ್ ರೈ ಸಹಕಾರಿಯ ಅಪಾರ ಅನುಭವದೊಂದಿಗೆ ಜನರ ಜತೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಸಂಸ್ಥೆಯನ್ನು ಲಾಭದತ್ತ ಮುನ್ನಡೆಸಿದ್ದು ಇದೀಗ ರಾಜ್ಯ ಸಹಕಾರ ಮಹಾಮಂಡಳಿಯ ನಿರ್ದೇಶಕರಾಗಿರುವುದು ಹೆಮ್ಮೆಯ ವಿಚಾರ ಎಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.

ಪುತ್ತೂರು ದರ್ಬೆಯ ಪ್ರಶಾಂತ್ ಮಹಲ್ ಸೆನೆಟ್ ಸಭಾಂಗಣದಲ್ಲಿ ಶನಿವಾರ ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ, ರಾಜ್ಯ ಸಹಕಾರ ಮಹಾಮಂಡಳಿ ಆಡಳಿತ ಮಂಡಳಿಗೆ ದ.ಕ. ಜಿಲ್ಲೆಯಿಂದ ಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿರಿಯ ಸಹಕಾರಿಗಳ ಆಶೀರ್ವಾದದಿಂದ ರಾಜ್ಯ ಮಹಾಮಂಡಳಿಯಲ್ಲೂ ಅವಕಾಶ ಸಿಕ್ಕಿದೆ. ಸಹಕಾರಿ ಕ್ಷೇತ್ರದಲ್ಲಿ ಸೀತಾರಾಮ ರೈ ಮಾರ್ಗದರ್ಶನದಲ್ಲೇ ನಾವು ಬೆಳೆದಿದ್ದು, ಕೆಎಂಎಫ್ ಸಂಸ್ಥೆಯ ಬೆಳವಣಿಗೆಗೂ ಅವರು ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪಿ. ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಸಹಕಾರ ಸಂಘದ ನಿರ್ದೇಶಕ ಚಿಕ್ಕಪ್ಪ ನಾಕ್, ಸಂಘದ ಉಪಾಧ್ಯಕ್ಷ ಎನ್.ಸುಂದರ್ ರೈ ಸವಣೂರು ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ ಸ್ವಾಗತಿಸಿದರು. ಪಾಂಡೇಶ್ವರ ಶಾಖೆಯ ಮ್ಯಾನೇಜರ್ ಮಹಾಲಕ್ಷ್ಮೀ ಕೆ. ಸನ್ಮಾನ ಪತ್ರ ವಾಚಿಸಿದರು. ಎಜಿಎಂ ಸುನಾದ್ ರಾಜ್ ಶೆಟ್ಟಿ ವಂದಿಸಿದರು. ಸವಣೂರು ಸಿಎ ಬ್ಯಾಂಕ್ ಸಿಇಒ ಚಂದ್ರಶೇಖರ ಪಿ. ಕಾರ್ಯಕ್ರಮ ನಿರೂಪಿಸಿದರು.