ಮಲೇರಿಯಾ ನಿಯಂತ್ರಣ ಹಾಗೂ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಕುರಿತ ಸಭೆಯಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು. ಡಾ.ದೀಪಕ್ ರೈ, ವೀರೇಂದ್ರಪ್ಪ, ನವೀನ್ ಭಂಡಾರಿ ಎಚ್., ವಿದ್ಯಾ ಎಂ.ಕಾಳೆ ಇತರರು ಇದ್ದರು. 
ದಕ್ಷಿಣ ಕನ್ನಡ

ಸಮನ್ವಯದಿಂದ ಕಾರ್ಯ ನಿರ್ವಹಣೆ PUTTUR

ಪ್ರಮುಖ ಮುಖ್ಯಾಂಶಗಳು

  • ಎಸಿ ಸ್ಟೆಲ್ಲಾ ವರ್ಗೀಸ್ ಸೂಚನೆ
  • ಮಲೇರಿಯಾ ನಿಯಂತ್ರಣ ಸಭೆ
ಪುತ್ತೂರು: ಉದ್ಯಮ, ಹೊಟೇಲ್, ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಹೊರರಾಜ್ಯ ಅಥವಾ ಹೊರಜಿಲ್ಲೆಯಿಂದ ಬಂದವರ ಜತೆಗೆ ಸ್ಥಳೀಯ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೊಳಪಡಿಸಬೇಕು. ಸೋಂಕಿನ ಅರಿವಿಲ್ಲದೆ ಇತರರಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗರಿಷ್ಠ ಪ್ರಮಾಣದಲ್ಲಿ ಪರೀಕ್ಷೆ ನಡೆಸುವುದು ಅಗತ್ಯ. ರೋಗದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ, ಮಲೇರಿಯಾ ನಿಯಂತ್ರಣ ಹಾಗೂ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಮಲೇರಿಯಾ ಮತ್ತು ಡೆಂಘೆ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಆರಂಭಿಕ ಹಂತದಲ್ಲೇ ಅದನ್ನು ತಡೆಯದಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಅದು ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ. ಮುಂದಿನ ೧೫ ದಿನಗಳೊಳಗಾಗಿ ಪ್ರತಿ ಕ್ಷೇತ್ರದಲ್ಲೂ ಎಷ್ಟು ಮಂದಿ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡುವ ಜತೆಗೆ ಅವರ ರಕ್ತ ಪರೀಕ್ಷೆ ಮಾಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಹಿರಿಯ ಕಾರ್ಮಿಕ ನಿರೀಕ್ಷಕ ವೀರೇಂದ್ರಪ್ಪ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಎಚ್., ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆಲುವರಂಗಪ್ಪ, ನಗರ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಕಡಬ ಪಪಂ ಮುಖ್ಯಾಧಿಕಾರಿ ಲೀಲಾವತಿ, ಪುತ್ತೂರು ಆರೋಗ್ಯ ಇಲಾಖೆಯ ಚಂದ್ರಕಲಾ ಉಪಸ್ಥಿತರಿದ್ದರು.
"

ಪುತ್ತೂರು, ಕಡಬ ಸೇರಿ ೧೫ ಶಂಕಿತ ಡೆಂಘೆ ಪ್ರಕರಣಗಳು ಇದ್ದು, ೧೧ ಮಲೇರಿಯಾ ಪ್ರಕರಣಗಳಿವೆ. ಮಲೇರಿಯಾ ಪ್ರಕರಣ ಹೆಚ್ಚಾಗದಂತೆ ಕ್ರಮಕ್ಕೆ ಸಿಬ್ಬಂದಿ ಕ್ರಮ ಕೈಗೊಂಡಿದ್ದು ವಿವಿಧ ಹೊಟೇಲ್‌ಗಳಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ. ಇಲಾಖೆಯಲ್ಲಿ ಮಲೇರಿಯಾ ಪತ್ತೆಗಾಗಿ ರ್‍ಯಾಪಿಡ್ ಟೆಸ್ಟಿಂಗ್ ವ್ಯವಸ್ಥೆ ಇದ್ದು, ತಕ್ಷಣವೇ ಪರೀಕ್ಷೆಯ ಫಲಿತಾಂಶ ಪಡೆಯಲು ಸಾಧ್ಯವಿದೆ. ಸೋಂಕು ಪತ್ತೆಯಾದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವುದು ಮುಖ್ಯ.

— ಡಾ.ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ