ತಿರುವಿನಲ್ಲಿ ರಸ್ತೆ ಅಗೆದ ಪರಿಣಾಮ ಅಪಾಯಕ್ಕೆ ಆಹ್ವಾನಿಸುವಂತಿದೆ.
- ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರು, ಪಾದಚಾರಿಗಳು ಹೈರಾಣ
ಪುತ್ತೂರು: ಪುತ್ತೂರು ನಗರದ ಕೆಲವು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಭಯದಲ್ಲೇ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ರಸ್ತೆಗಳು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದ್ದು, ತಿಂಗಳು ಕಳೆದರೂ ದುರಸ್ತಿ ಕಾರ್ಯ ನಡೆದಿಲ್ಲ. ಈ ಬಗ್ಗೆ ಕೇಳಿದರೆ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತಿದೆ ನಗರಸಭೆ.
ಧೂಳುಮಯ: ಬೊಳುವಾರಿನಿಂದ ಸರ್ಕಾರಿ ಬಸ್ ನಿಲ್ದಾಣ ಸಂಪರ್ಕಿಸುವ ಮುಖ್ಯ ರಸ್ತೆ ತಿಂಗಳನಿಂದ ಧೂಳುಮಯವಾಗಿದೆ. ಕಟ್ಟಡ ಕಾಮಗಾರಿಯ ಮಣ್ಣು ಸಾಗಾಟದಿಂದ ರಸ್ತೆಯುದ್ದಕ್ಕೂ ಮಣ್ಣು ಬೀಳುತ್ತಿರುವುದೇ ಇದಕ್ಕೆ ಕಾರಣ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವು ಮಂದಿ ಸ್ಥಳೀಯಾಡಳಿತಕ್ಕೆ ದೂರು ನೀಡಿದ್ದಾರೆ. ಮಹಿಳಾ ಠಾಣೆಯಿಂದ ಮಯೂರ ಜಂಕ್ಷನ್ ನಡುವಿನ ರಸ್ತೆಯಲ್ಲಿ ಸಂಚರಿಸುವರು ಮಾಸ್ಕ್ ಧರಿಸಿಯೇ ಹೋಗುವಂಥ ಸ್ಥಿತಿ ಎದುರಾಗಿದೆ.
ಸಂಚಾರಿ ಪೊಲೀಸ್ ಠಾಣೆ ಸಮೀಪದಲ್ಲಿರುವ ಮೊಳಹಳ್ಳಿ ಶಿವರಾಯರ ವೃತ್ತದ ತಿರುವಿನಲ್ಲಿ ದುರಸ್ತಿಗೆಂದು ರಸ್ತೆ ಅಗೆದು ವಾರವೇ ಕಳೆದಿದೆ. ಅದರ ಸುತ್ತ ಸುರಕ್ಷತೆಗಾಗಿ ಇಟ್ಟಿರುವ ಬ್ಯಾರಿಕೇಡ್‌ಗಳು ವಾಹನಗಳು ಡಿಕ್ಕಿಯಾಗಿ ಬೀಳುವಂತಾಗಿದ್ದರೂ ಅಗತ್ಯ ಕ್ರಮಕ್ಕೆ ಮುಂದಾಗಿಲ್ಲ. ಶ್ರೀಧರ ಭಟ್ ಜಂಕ್ಷನ್‌ನಿಂದ ಮಾರುಕಟ್ಟೆ ಕಡೆ ಹೋಗುವ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣದ ಕಾರಣ ಪೇಚಿಗೆ ಸಿಲುಕುವಂತಾಗಿದೆ. ಈ ಬಗ್ಗೆ ನಗರಸಭೆಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಬೈಪಾಸ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿಯಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಕಟ್ಟಡ ಕಾಮಗಾರಿಗೆ ಹಾಕಿದ ಎಂ. ಸ್ಯಾಂಡ್ ರಸ್ತೆಯುದ್ದಕ್ಕೂ ಚೆಲ್ಲಿದ್ದು, ದ್ವಿಚಕ್ರವಾಹನ ಸವಾರರಿಗೆ ಮೃತ್ಯಕೂಪವಾಗಿ ಪರಿಣಮಿಸಿದೆ. ಕೆಲವು ತಿಂಗಳಿಂದ ಸಮಸ್ಯೆ ಇದ್ದರೂ ನಗರಸಭೆ ಕಂಡೂ ಕಾಣದಿಂತಿದೆ.
ರಸ್ತೆ ಕಿತ್ತು ಹೋದರೂ ಎಚ್ಚರವಾಗುತ್ತಿಲ್ಲ!
ಕಳೆದ ವರ್ಷ ಮೇ ಪ್ರಾರಂಭದಲ್ಲಿ ಡಾಂಬರು ಹಾಕಲು ಮುಂದಾಗಿ ಮಳೆ ಕಾರಣದಿಂದ ಅಕ್ಟೋಬರ್‌ವರೆಗೆ ಜಲ್ಲಿಯ ರಸ್ತೆಯಲ್ಲಿ ಓಡಾಡಿ ಜನರು ಸುಸ್ತಾಗಿದ್ದರು. ಈಗ ಮತ್ತೆ ಹಿಟಾಚಿ ವಾಹನ ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸಿದೆ ಓಡಾಡಿದ ಪರಿಣಾಮ ರಸ್ತೆ ಕಿತ್ತು ಹೋಗಿದೆ. ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದರೂ ಅಗತ್ಯ ಕ್ರಮವಿಲ್ಲ. ಹಿಟಾಚಿ ಕೆಲಸ ನಗರ ಸಭೆಯದ್ದಲ್ಲ ಎಂಬ ಮಾಹಿತಿ ಅಧಿಕಾರಿ ವರ್ಗದಿಂದ ಲಭಿಸಿದೆ.
ಮೋರಿ ಕಾಮಗಾರಿ ಬಳಿಕ ರಸ್ತೆ ಸರಿ ಮಾಡಿಲ್ಲ!
ಜೈನ ಭವನದ ಬಳಿಯಲ್ಲಿ ಮಳೆಗಾಲದ ನೀರು ಹರಿಯುವ ಚರಂಡಿ ಬ್ಲಾಕ್ ಆಗಿ ರಸ್ತೆಯುದ್ದಕ್ಕೂ ನೀರು ಹರಿದು ಹೊಳೆಯಾಗಿ ಪರಿವರ್ತನೆಯಾಗುತ್ತಿತ್ತು. ಮಳೆಗಾಲದ ಬಳಿಕ ಮೋರಿಯನ್ನು ನೂತನವಾಗಿ ನಿರ್ಮಾಣ ಮಾಡಿದ್ದು, ರಸ್ತೆ ಹಾಗೂ ಮೋರಿಯ ನಡುವಿನ ಜಾಗಕ್ಕೆ ಸರಿಯಾಗಿ ತೇಪೆ ಹಾಕದೆ ವಾಹನ ಸವಾರರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಆಸುಪಾಸಲ್ಲೇ ಸಮಸ್ಯೆ ಇದ್ದರೂ ನಗರಸಭೆ ಜಾಣಕುರುಡು!
ಎಲ್ಲ ಸಮಸ್ಯೆಗಳು ನಗರಸಭೆಯ ಐದು ನೂರು ಮೀಟರ್ ಆಸುಪಾಸಿನಲ್ಲೇ ಎದ್ದು ಕಾಣುತ್ತವೆ. ಅಧಿಕಾರಿಗಳು ಕಚೇರಿಗೆ ಬಂದು ಹೋಗುವ ಸಮಯದಲ್ಲೂ ಪರಿಶೀಲನೆಗೆ ಮುಂದಾಗಿಲ್ಲ. ಕಚೇರಿ, ಸಭೆಗಳನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗುವುದಿಲ್ಲ ಎಂಬುದಕ್ಕೆ ನಗರಸಭೆಯ ಸುತ್ತ ಇರುವ ಸಮಸ್ಯೆಗಳೇ ಕೈಗನ್ನಡಿಯಾಗಿದೆ.
ಮೊಳಹಳ್ಳಿ ಶಿವರಾಯರ ವೃತ್ತದ ಬಳಿ ರಸ್ತೆಯ ಮಣ್ಣು ಅಗೆದಿದ್ದು ವಾಹನ ಸವಾರರಿಗೆ ಸಂಚರಿಸಲು ತೊಂದರೆ ಆಗುತ್ತಿದೆ. ಕಳೆದ ೨೦-೨೫ ದಿನದಿಂದ ಈ ರೀತಿಯಾಗಿದ್ದು, ತಿರುವು ರಸ್ತೆಯಲ್ಲಿ ಎಡಬದಿಯಲ್ಲಿ ಚಲಾಯಿಸುವ ವಾಹನಗಳು ತೀರ ಬಲ ಬದಿಗೆ ಚಲಾಯಿಸುವ ಪರಿಸ್ಥಿತಿ ಇದೆ. ಇದು ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಈ ಬಗ್ಗೆ ದೂರನ್ನು ನೀಡಿದರೂ ದುರಸ್ತಿಗೆ ಮುಂದಾಗಿಲ್ಲ.