ಪಾಲಿಕೆ ದುರಾಡಳಿತ ವಿರುದ್ದ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲದ ನೇತೃತ್ವದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಯಿತು.  
ದಕ್ಷಿಣ ಕನ್ನಡ

ಮಂಗಳೂರು ಪಾಲಿಕೆ ದುರಾಡಳಿತ ವಿರುದ್ದ ಜನಾಕ್ರೋಷ

ಮಂಗಳೂರು: ರಾಜ್ಯ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ದುರಾಡಳಿತದಿಂದ ಕೂಡಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು, ಜನವಿರೋಧಿ ನೀತಿ ಜಾರಿಯಲ್ಲಿದೆ. ಆಡಳಿತ ಸಂಪೂರ್ಣ ವೈಲ್ಯ ಅನುಭವಿಸಿದ್ದು ಪಾಲಿಕೆಯ ದುರಾಡಳಿತ ಕೊನೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲದ ನೇತೃತ್ವದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಯಿತು.
ಪಾಲಿಕೆಯ ಮುಂಭಾಗ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ಪಾಲಿಕೆ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಳೆದ ಒಂದು ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರ ಆಡಳಿತಾಧಿಕಾರಿಯವರ ಕೈಯಲ್ಲಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ತಮ್ಮ ಯಾವುದೇ ಸಮಸ್ಯೆಗಳಿಗೆ ಪಾಲಿಕೆಯಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂದು ಜನತೆ ಆರೋಪಿಸುತ್ತಿದ್ದಾರೆ. ಸರ್ಕಾರ ತಕ್ಷಣ ಪಾಲಿಕೆ ಚುನಾವಣೆಗೆ ಆದ್ಯತೆ ನೀಡುವ ಮೂಲಕ ಪಾಲಿಕೆಯಲ್ಲಿ ಆಡಳಿತ ಸುಗಮವಾಗಿ ಸಾಗಲು ಒತ್ತು ನೀಡಬೇಕು ಎಂದರು.
ಮಾಜಿ ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಜನನ ಮರಣ ಪ್ರಮಾಣ ಪ್ರತಿಗೆ 30 ರೂಪಾಯಿ ಇದ್ದದ್ದು, 300 ರೂಪಾಯಿಗೆ ತಲುಪಿದೆ. ಅಧಿಕಾರಿಗಳ ಆಡಳಿತದಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಷ್ಟರಲ್ಲಿಯೇ ನಗರದ ರಾಜಾ ಕಾಲುವೆಗಳ ಹೂಳೆತ್ತುವಿಕೆಯ ಕಾರ್ಯ ಆರಂಭವಾಗಬೇಕಿತ್ತು. ಆದರೆ ಪಾಲಿಕೆಯ ಅಕಾರಿಗಳು ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ರಾಜೇಶ್ ಕೊಟ್ಟಾರಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಅಧಿಕಾರಿಗಳು ದರ್ಪದಿಂದ ವ್ಯವಹರಿಸುತ್ತಿದ್ದಾರೆ. ಪಾಲಿಕೆಯ ದುರಾಡಳಿತ ಕೊನೆಯಾಗಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ರವಿಶಂಕರ ಮಿಜಾರು, ತಿಲಕ್ ರಾಜ್ ಕೃಷ್ಣಾಪುರ, ರಮೇಶ್ ಕಂಡೆಟ್ಟುಘಿ, ನಂದನ್ ಮಲ್ಯಘಿ, ಸಂದೀಪ್ ಪಚ್ಚನಾಡಿ, ಶಕಿಲಾ ಕಾವಾ, ಪೂರ್ಣಿಮಾ ರಾವ್, ಅರುಣ್ ಜಿ ಶೇಟ್, ಜಗದೀಶ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭ್ರಷ್ಟ ಆಯುಕ್ತರ ನೇಮಕ

ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟ ಆಯುಕ್ತರ ನೇಮಕವಾಗಿದೆ. ಭ್ರಷ್ಟ ಅಧಿಕಾರಿಗಳ ಕೈಗೆ ಅಧಿಕಾರ ನೀಡಿ ಸರ್ಕಾರ ಜನತೆಯ ತೆರಿಗೆಯ ಹಣ ಲೂಟಿ ಮಾಡುತ್ತಿದೆ. ಇಲ್ಲಿನ ಜನತೆಯ ಹಣ ಲೂಟಿ ಮಾಡಿ ಸರ್ಕಾರದ ಖಜಾನೆ ತುಂಬಿಸುವ ಕಾರ್ಯ ಕಳೆದ ಒಂದು ವರ್ಷದಿಂದ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಸರ್ಕಾರ ತಕ್ಷಣ ಪಾಲಿಕೆ ಚುನಾವಣೆ ನಡೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಎಚ್ಚರಿಸಿದರು.