ಸಚಿವ ಕೆ.ಜೆ. ಜಾರ್ಜ್ ಅವರು ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್‌ಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಂಎಲ್‌ಸಿ ಐವನ್ ಡಿ'ಸೋಜಾ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಉಪಸ್ಥಿತರಿದ್ದರು.
- ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
ಮಂಗಳೂರು: ಪ್ರವಾಸಿಗರನ್ನು ಆಕರ್ಷಿಸಿ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಅವರು ಮಂಗಳೂರಿನ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್‌ಗೆ ಭಾನುವಾರ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ಕರಾವಳಿ ಪ್ರವಾಸೋದ್ಯಮದ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ, ಕ್ರೂಸ್ ಟೂರಿಸಂ, ಬೋಟ್ ಹೌಸ್, ಜಲಕ್ರೀಡೆಗಳಿಗೆ ಪ್ರೋತ್ಸಾಹ, ಸಿಆರ್‌ಝಡ್ ನಿಯಮಗಳ ಸರಳೀಕರಣಕ್ಕೆ ಮಹತ್ವದ ಹೆಜ್ಜೆ ಇರಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸಂಬಂಧಪಟ್ಟವರ ಜೊತೆ ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಲಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಪ್ರಮುಖ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಬೋಟ್ ಹೌಸ್ ಆಕರ್ಷಣೆ
ಪ್ರಸ್ತುತ ಪ್ರವಾಸಿ ಕ್ರೂಸ್ ಶಿಪ್‌ಗಳು ಮಂಗಳೂರಿಗೆ ಬಂದು ಇಂಧನ ತುಂಬಿಸಿಕೊಂಡು ಹೋಗುತ್ತವೆ. ಪ್ರವಾಸಿಗರು ಇಳಿದು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡುವುದಿಲ್ಲ. ಈಗಾಗಲೇ ಇಲಾಖಾ ಕಾರ್ಯದರ್ಶಿಯವರು ಮಂಗಳೂರು ಬಂದರು ಅಧಿಕಾರಿಗಳ ಜೊತೆಗೆ ಈ ಬಗ್ಗೆ ಸಭೆ ನಡೆಸಿದ್ದಾರೆ. ಮಂಗಳೂರಿನಿಂದ ಗೋವಾ ಕ್ರೂಸ್ ಶಿಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಕೇರಳ ಮಾದರಿಯಲ್ಲಿ ಬೋಟ್ ಹೌಸ್‌ಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.
ಸಂಪುಟ ಸಭೆಯಲ್ಲಿ ತೀರ್ಮಾನ
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರವಾಸೋದ್ಯಮ ಸಂಬಂಧಿತ ಸಭೆಯಲ್ಲಿ ಆಗ ಡಿಸಿಎಂ ಆಗಿದ್ದ ಈಗಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಇದಕ್ಕೆ ಪೂರಕವಾಗಿ ಈ ಬಾರಿಯ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು. ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಉದ್ಯೋಗ, ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದರು.
ಸಿಆರ್‌ಝಡ್ ತೊಡಕು ನಿವಾರಣೆಗೆ ಕ್ರಮ
ಸಿಆರ್‌ಝಡ್ ನಿಯಮಗಳ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆದು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು. ಕಡಲತೀರಗಳಲ್ಲಿ ವಾಟರ್ ಸ್ಪೋರ್ಟ್ಸ್ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಸಾಹಸಮಯ ಕ್ರೀಡೆಗಳಿಗೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಖಾಸಗಿ ಹೂಡಿಕೆದಾರರ ಜೊತೆ ಸಭೆ ನಡೆಸಲಾಗಿದೆ.
ಹೋಮ್ ಸ್ಟೇ ನಿಯಮ ಕಟ್ಟುನಿಟ್ಟು
ಹೋಮ್ ಸ್ಟೇಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಲಾಗಿದೆ. ಮನೆಯಲ್ಲಿ ಅತಿಥಿಗಳಿಗಾಗಿ ಕೊಠಡಿ ಮಾಡಿ ಅದರಲ್ಲಿ ಪ್ರವಾಸಿಗರನ್ನು ಇರಿಸಿಕೊಳ್ಳುವುದು ಹೋಮ್ ಸ್ಟೇ ಆಗಿದೆ. ಲಾಡ್ಜ್ ರೀತಿಯಲ್ಲಿ ಮಾಡುವ ಹಾಗಿಲ್ಲ ಎಂದರು.
ಸಚಿವರು ಬೀಚ್ ಪ್ರದೇಶವನ್ನು ವೀಕ್ಷಿಸಿ ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಪಡೆದರು. ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಬಹುದಾದ, ಅಳವಡಿಸಬೇಕಾಗಿರುವ ಮೂಲಸೌಕರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಮಾಜಿ ಶಾಸಕ ಜೆ.ಆರ್. ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.