ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ಸಂಚಾರ, ರಸ್ತೆ, ಸುರಕ್ಷತೆ ಹಾಗೂ ಪರಿಸರ ಸಮಸ್ಯೆಗಳ ಕುರಿತು ಗುರುವಾರ ಆಯೋಜಿಸಲಾದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೆದ್ದಾರಿ ಕಾಮಗಾರಿಯ ವೇಳೆ ಪರ್ಯಾಯ ಸರ್ವೀಸ್ ರಸ್ತೆ ನಿರ್ಮಿಸದೆ ಈಗಾಗಲೇ ಬಳಕೆಯಲ್ಲಿರುವ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆ ಕಲ್ಪಿಸಿದ ಬಳಿಕವೇ ಇತರ ರಸ್ತೆಗಳನ್ನು ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಕಾಮಗಾರಿಯಿಂದ ಪಿಡಬ್ಲ್ಯುಡಿ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಹೊಣೆ ಯಾರದ್ದು ಎಂಬ ಪ್ರಶ್ನೆಯೂ ಕೇಳಿಬಂತು. ಹೆದ್ದಾರಿ ಇಲಾಖೆಯ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ನೋಡಲ್ ಅಧಿಕಾರಿ ಸಂಗಮೇಶ್ ತಿಳಿಸಿದರು.
ಕೈಗಾರಿಕಾ ವಲಯದ ತ್ಯಾಜ್ಯ ನೀರನ್ನು ಕಡಲಕೆರೆ ಭಾಗದ ಕೆರೆಗೆ ಹರಿಸಲಾಗುತ್ತಿದ್ದು, ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಜೇಶ್ ಕಡಲಕೆರೆ ಆರೋಪಿಸಿದರು.
ಗ್ರಾಮಸಭೆಯಲ್ಲಿ ಪಶುಪಾಲನೆ, ಗಣಿ, ಅರಣ್ಯ, ಬಿಸಿಎಂ, ರಾಷ್ಟ್ರೀಯ ಹೆದ್ದಾರಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೆಸ್ಕಾಂ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆದ್ದಾರಿ ಕಾಮಗಾರಿ ನಿರ್ವಹಿಸುವ ಕೆಲವು ವಾಹನಗಳಲ್ಲಿ ನೋಂದಣಿ ಸಂಖ್ಯೆ ಹಾಗೂ ರಿಫ್ಲೆಕ್ಟರ್‌ಗಳಿಲ್ಲದೆ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದರಿಂದ ಅಪಘಾತದ ಅಪಾಯವಿದ್ದು, ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಕಾಮಗಾರಿಯಿಂದ ಸಂಭವಿಸುವ ಸಾವುನೋವುಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕು ಎಂದೂ ಆಗ್ರಹಿಸಿದರು.
ಮರಳು ಮತ್ತು ಕಲ್ಲಿನ ದರ ಮೂರು ಪಟ್ಟು ಹೆಚ್ಚಾಗಿದ್ದು, ಜಿಲ್ಲಾಧಿಕಾರಿ ಏಕರೂಪ ದರ ನಿಗದಿಪಡಿಸಬೇಕು ಎಂದು ಯಾದವ ಶೆಟ್ಟಿ ಒತ್ತಾಯಿಸಿದರು. ಪುತ್ತಿಗೆ ವ್ಯಾಪ್ತಿಯಿಂದ ಬಾಕ್ಸೈಟ್ ಸಾಗಾಟ ನಡೆಯುತ್ತಿದ್ದು, ಅದರ ಉದ್ದೇಶ ಹಾಗೂ ಸಾಗಿಸುವವರ ವಿವರವನ್ನು ಗ್ರಾಮಸ್ಥರಿಗೆ ತಿಳಿಸಬೇಕು ಎಂದರು. ಸ್ಥಳೀಯ ಗಣಿಗಾರಿಕೆಗೆ ಪಂಚಾಯಿತಿ ಅನುಮತಿ ಕಡ್ಡಾಯವಾಗಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.