- ಬೀಚ್ ಪ್ರವೇಶ ದ್ವಾರದಲ್ಲೇ ನಗರಸಭೆಯ ತ್ಯಾಜ್ಯ ದರ್ಶನ
- ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ ಎಂದರೂ ಹತ್ತು ಟನ್ ತ್ಯಾಜ್ಯ ಸಂಗ್ರಹ
- ಅಪಾಯಕಾರಿಯಾದರೂ ಮನಮೋಹಕ
ಅಪಾಯಕಾರಿಯಾದರೂ ಮನಮೋಹಕ
ಇಲ್ಲಿನ ಸಮುದ್ರ ಎಷ್ಟೊಂದು ಅಪಾಯಕಾರಿ ಎಂದರೆ ಕಿನಾರೆಗೆ ಬಂದ ಅದೆಷ್ಟೋ ಪ್ರವಾಸಿಗರ ಪ್ರಾಣ ಕಸಿದಿದೆ. ಅಲೆಯೊಂದಿಗೆ ಕಿನಾರೆಗೆ ಬಂದಪ್ಪಳಿಸುವ ನೀರಿನಲ್ಲಿ ಆಟವಾಡುವ ಪ್ರವಾಸಿಗರನ್ನು ತನ್ನೊಂದಿಗೇ ಎಳೆದೊಯ್ಯುವ ಸಾಮರ್ಥ್ಯ ಹೊಂದಿದೆ. ಅದರೂ ಅಲೆಗಳ ಮನಮೋಹಕ ದೃಶ್ಯಕ್ಕೆ ತಲೆದೂಗದವರೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಕಡಲ ಕಿನಾರೆಯಲ್ಲಿ ತಿಂಡಿ-ತಿನಿಸುಗಳ ಪೆಟ್ಟಿಗೆ ಅಂಗಡಿಗಳು, ಆಟದ ವಸ್ತುಗಳ ಮಾರಾಟ, ಮನರಂಜನಾ ಆಟಗಳು ಆರಂಭಗೊಂಡಿರುವುದರಿಂದ ಹಿಂದಿಗಿಂತಲೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪ್ರವಾಸಿಗರಿಗೆ ಬೀಚ್ ಪ್ರವೇಶ ದ್ವಾರದಲ್ಲೇ ನಗರಸಭೆಯ ತ್ಯಾಜ್ಯ ದರ್ಶನದೊಂದಿಗೆ, ದುರ್ನಾತದ ಸ್ವಾಗತ ಕೋರಲಾಗುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನಿರ್ವಹಣೆಗೆ ಘಟಕ ಇಲ್ಲದ ಕಾರಣ ಮಂಗಳೂರಿಗೆ ರವಾನಿಸಲಾಗುತ್ತಿದೆ. ಟಿಪ್ಪರ್ ಲಾರಿ ಮತ್ತು ಟೆಂಪೋಗಳಲ್ಲಿ ಸಂಗ್ರಹಿಸಿ ತರುವ ತ್ಯಾಜ್ಯವನ್ನು ಕೋಟೆಪುರ ಸಂಪರ್ಕ ರಸ್ತೆ ಮತ್ತು ಬೀಚ್ ಪ್ರವೇಶ ದ್ವಾರದಲ್ಲೇ ಬೇರ್ಪಡಿಸಿ ಮಂಗಳೂರಿಗೆ ಹೋಗುವ ವಾಹನಗಳಿಗೆ ವರ್ಗಾಯಿಸಲಾಗುತ್ತಿದೆ. ಈ ಲಾರಿಗಳಿಂದ ಸುರಿಯುವ ಕಲುಷಿತ ನೀರು ಹರಿದು ತೀವ್ರ ದುರ್ನಾತ ಬೀರುತ್ತಿದೆ.
ಮೊಗವೀರ ಪಟ್ಣ ಪ್ರವೇಶ ದ್ವಾರದಲ್ಲಿರುವ ತ್ಯಾಜ್ಯ ವರ್ಗಾಯಿಸುವ ಘಟಕ.
ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ ಎಂದರೂ ಹತ್ತು ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಮನೆಗಳಲ್ಲೇ ಹಸಿಕಸ ನಿರ್ವಹಣೆ ಯೋಜನೆಗೆ ಪೂರಕ ಸ್ಪಂದನೆ ಸಿಕ್ಕಿಲ್ಲ. ಸಣ್ಣ ಘಟಕಗಳಾದ ಕಲ್ಲಾಪು ಮತ್ತು ಉಳಿಯದಲ್ಲಿ 500 ಕೆ.ಜಿ. ಹಸಿಕಸ ನಿರ್ವಹಣೆ ಮಾಡಲಾಗುತ್ತಿದ್ದು ಉಳಿಯದಲ್ಲಿ ಸಾವಿರ ಕೆ.ಜಿ.ನಿರ್ವಹಣೆ ನಿಟ್ಟಿನಲ್ಲಿ ವಿಸ್ತರಣಾ ಕೆಲಸ ನಡೆಯುತ್ತಿದೆ.
ಮೊಗವೀರ ಪಟ್ಣ ಬೀಚ್ ಪ್ರವೇಶ ದ್ವಾರದಲ್ಲಿರುವ ತ್ಯಾಜ್ಯ ವರ್ಗಾಯಿಸುವ ಘಟಕ.
ಒಂದೂವರೆ ಕೋಟಿ ರೂ. ಬೇಡಿಕೆ!
ಮೊಗವೀರಪಟ್ಣ ಉಳ್ಳಾಲದ ಪ್ರಥಮ ಬೀಚ್ ಉತ್ಸವ ನಡೆದ ಪ್ರದೇಶವಾಗಿದ್ದು ಅಲ್ಲೀಗ ನಗರಸಭೆಯೇ ತ್ಯಾಜ್ಯ ಕೊಂಪೆಯನ್ನಾಗಿಸಿದೆ. ಇದನ್ನು ವಿರೋಧಿಸಿ ಸುಮಾರು 500 ಸಹಿಗಳುಳ್ಳ ಪತ್ರ ನಗರಸಭೆಗೆ ನೀಡಿ ನಿರಂತರ ಹೋರಾಟ ನಡೆಸಿದರೂ ಯೋಜನವಾಗಿಲ್ಲ. ಈಗಲೂ ಹೋರಾಟ ಮುಂದುವರಿಸಲಾಗಿದ್ದು ಸ್ಪೀಕರ್ ಈ ಬಗ್ಗೆ ಗಮನಹರಿಸಬೇಕು.
ಉಳ್ಳಾಲ ಮಾತ್ರವಲ್ಲದೆ ಸೋಮೇಶ್ವರ ಮತ್ತು ಕೋಟೆಕಾರ್ ವ್ಯಾಪ್ತಿಯಲ್ಲೂ ಸರ್ಕಾರಿ ಜಮೀನು ಇಲ್ಲದ ಕಾರಣ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಸಾಧ್ಯವಾಗಿಲ್ಲ. ಯೆನೆಪೋಯ ಸಂಸ್ಥೆಯವರು ಒಂದು ಎಕರೆ ಜಮೀನು ನೀಡಲು ಒಪ್ಪಿದ್ದು ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ.