ಡಾ. ರಂಜನ್ ಅವರಿಗೆ ಅಂತಾರಾಷ್ಟ್ರೀಯ ರೋಟರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಲಯೆಂಕಾ ಹಕೀಂ ಬಾಬಲೋಲಾ, ಕೆ.ಪಿ. ನಾಗೇಶ್, ವೆಂಕಟೇಶ್ ಮೊದಲಾದವರಿದ್ದರು.
ಮಂಗಳೂರು : ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯ ತಜ್ಞ ಹಾಗೂ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ರಂಜನ್ ಅವರಿಗೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ಪ್ರಾಯೋಜಿಸುವ ಪ್ರತಿಷ್ಠಿತ ನ್ಯಾಷನಲ್ ರೋಟರಿ ಚಾಂಪಿಯನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗೋವಾ ರಾಜ್ಯದ ಪಂಜಿಮ್ ನಗರದ ‘ಹೋಟೆಲ್ ನೋವಾಟೆಲ್’ ಸಭಾಂಗಣದಲ್ಲಿ ಆ.14ರಂದು ಜರುಗಿದ ರೋಟರಿ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ, ನೈಜೀರಿಯಾ ರಾಷ್ಟ್ರ ಮೂಲದ ಒಲಯೆಂಕಾ ಹಕೀಂ ಬಾಬಲೋಲಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.
ಡಾ. ರಂಜನ್ ಅವರು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸಿದ ಅನುಪಮ ಹಾಗೂ ನಿಸ್ವಾರ್ಥ ಸೇವೆ, ಪ್ರದರ್ಶಿಸಿದ ಅಸಾಧಾರಣ ನಾಯಕತ್ವ ಗುಣ, ಸಾಧಿಸಿದ ಸಾಧನೆಗಳು, ಅಮೂಲ್ಯ ಕೊಡುಗೆಗಳು ಮತ್ತು ಸ್ವಹಿತ ಮೀರಿದ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಅಂತಾರಾಷ್ಟ್ರೀಯ ಅಧ್ಯಕ್ಷರ ಪತ್ನಿ ಪ್ರೆಸ್ಸಿ ಬಾಬಲೋಲ, ರೋಟರಿ ಅಂತಾರಾಷ್ಟ್ರೀಯ ಜಿಲ್ಲಾ 3170ರ ಗವರ್ನರ್ ಡಾ. ಲೆನ್ನಿ ಡಕೋಸ್ಟಾ, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಕೆ.ಪಿ. ನಾಗೇಶ್, ಮಾಜಿ ನಿರ್ದೇಶಕ ವೆಂಕಟೇಶ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ನಿಯೋಜಿತ ಗವರ್ನರ್ ಸೂರ್ಯನಾರಾಯಣ, ಸದಸ್ಯತ್ವ ಅಭಿವೃದ್ಧಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಡಾ.ಕೇಶವ್ ಉಪಸ್ಥಿತರಿದ್ದರು.