ಮಂಗಳೂರು: ಸಮಾಜಮುಖಿ ಹಾಗೂ ಮಹಿಳಾಪರ ಸೇವೆಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಯವರು ಕೈ ಚೆಲ್ಲಿದ ಪ್ರಕರಣದ ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯೊಬ್ಬರಿಗೆ ಜೀವದಾನ ಮಾಡಿದೆ.
33 ವಾರಗಳ ಗರ್ಭಿಣಿಯೊಬ್ಬರನ್ನು ಪ್ರಸವಪೂರ್ವ ರಕ್ತಸ್ರಾವದ ಕಾರಣದಿಂದಾಗಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲಿಸಲಾಗಿತ್ತು. ಮಹಿಳೆಯ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗಿ ಪ್ಲಾಸೆಂಟಾ ಅಥವಾ ಮಾಸು ಶಿಶು ತಾಯಿ ಗರ್ಭದಿಂದ ಹೊರಬರುವ ದಾರಿಗೆ ಅಡ್ಡವಾಗಿ ಇರುವುದು ಕಂಡು ಬಂದಿತ್ತು. ಇದು ಮೂತ್ರ ಕೋಶ, ಸಣ್ಣ ಕರುಳು ಹಾಗೂ ದೊಡ್ಡ ಕರುಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭ ಗರ್ಭಕೋಶವನ್ನೇ ಶಸ್ತ್ರ ಚಿಕಿತ್ಸಾ ಮುಖಾಂತರ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ. 3 ಲೀಟರ್ ನಿಂದ 4 ಲೀಟರ್‌ನಷ್ಟು ಮೌಲ್ಯಯುತ ರಕ್ತ ಪೋಲಾಗುವುದರಿಂದ ಈ ಗರ್ಭಿಣಿ ರೋಗಿಯನ್ನು ಬದುಕುಳಿಸುವುದೇ ಸವಾಲು. ಈ ಪರಿಸ್ಥಿತಿಯಲ್ಲಿ ತಾಯಿ ಮರಣಗಳು ಸಂಭವಿಸುವ ಸಂದರ್ಭವೇ ಅತ್ಯಧಿಕ. ಆದರೆ ಕಳೆದ ಒಂದೂವರೆ ವರ್ಷದಿಂದ ಅಳವಡಿಸಿಕೊಂಡ ಜೀವರಕ್ಷಕ ವಿಧಾನದಿಂದಾಗಿ ಈ ಮಾರಣಾಂತಿಕ ಸನ್ನಿವೇಶದಿಂದ ತಾಯಂದಿರನ್ನು ಉಳಿಸಿಕೊಳ್ಳಲಾಗಿದೆ. ವಿವಿಧ ಅಂಗಾಂಗಗಳು ಇದರಲ್ಲಿ ಬಲಿಪಶುವಾಗುವುದರಿಂದ ಅಂಥ ಅಂಗಗಳಿಗೆ ಸಂಬಂಧಿತ ತಜ್ಞರು ಮತ್ತು ಸೂಪರ್ ಸ್ಪೆಶಾಲಿಟಿ ತಜ್ಞರನ್ನು ಮುಂಚಿತವಾಗಿಯೇ ಶಸ್ತ್ರ ಚಿಕಿತ್ಸಾಗಾರಕ್ಕೆ ಬರಮಾಡಿಕೊಂಡು ಅವರ ಉಪಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಗರ್ಭಿಣಿಯ ದೇಹದಿಂದ ಹೊರಹೊಮ್ಮುವ ಒಂದೊಂದು ಹನಿ ರಕ್ತವನ್ನು ಕನಿಷ್ಠಗೊಳಿಸಬೇಕೆನ್ನುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ದುರ್ಗಾಪ್ರಸಾದ್.ಎಂ.ಆರ್.ಅವರ ಪರಿಕಲ್ಪನೆಯ ವಿಶೇಷ ಅಂಶವಾಗಿ ಈ ಪ್ರಕ್ರಿಯೆಯನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಕಾರ್ಯದಲ್ಲಿ ಸಕಾಲಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ಕೆ.ಎಂ.ಸಿ.ಪ್ರಸೂತಿ ವಿಭಾಗದ ಪ್ರೊ.ಡಾ.ನಿಖಿಲ್ ಶೆಟ್ಟಿ ಅವರ ಪಾತ್ರ ಹಿರಿದಾಗಿದ್ದು ಮುಖ್ಯ ಪ್ರಸೂತಿ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸಿದರು. ಸೀನಿಯರ್ ರೆಸಿಡೆಂಟ್ ಡಾ.ಸುಶಾಮ್ ಶೆಟ್ಟಿ, ಅಸಿಸ್ಟೆಂಟ್ ಪ್ರೊಫೆಸರ್ ಗಳಾದ ಡಾ.ಗಗನ್ ದೀಪ್ ಕೌರ್ ಮತ್ತು ಡಾ.ಪ್ರಥ್ವಿ ಶೆಣೈ, ಜೂನಿಯರ್ ರೆಸಿಡೆಂಟ್ ಡಾ.ತನ್ವಿತಾ ಸಹಕರಿಸಿದರು.
ಕೆ.ಎಂ.ಸಿ.ಯ ಡಾ.ಪ್ರಮೋದ್, ಡಾ.ಮೀಟ್, ಡಾ.ಶಿವಾನಂದ್ ನಿರಂತರ 4 ಗಂಟೆಗಳ ಸತತ ಶಸ ಚಿಕಿತ್ಸಾ ಸೇವಾ ಪ್ರಯತ್ನದಿಂದ ಸಂಪೂರ್ಣ ಘಾಸಿಕೊಂಡ ಮೂತ್ರಕೋಶಕ್ಕೆ ಹೊಸ ವಿನ್ಯಾಸದ ಪೂರ್ವ ಚಿಕಿತ್ಸಾ ರೂಪವನ್ನು ನೀಡಿದರು. ಅರಿವಳಿಕೆ ತಜ್ಞರಾಗಿ ಕೆ.ಎಂ.ಸಿ.ಯ ಡಾ.ಶಿಲ್ಪಾ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆದ್ಯಂತವಾಗಿ ರೋಗಿಯ ಪ್ರಾಣ ಮಾನದಂಡಗಳ ಮೇಲೆ ತೀವ್ರ ನಿಗಾವನ್ನು ವಹಿಸಿದರು. ಅಪರಿಪಕ್ವ ಶಿಶುವನ್ನು ನವಜಾತ ಶಿಶು ವಿಭಾಗಕ್ಕೆ ಸ್ಥಳಾಂತರಗೊಳಿಸುವ ಮುಂಚಿತವಾಗಿ ಅಗತ್ಯ ತುರ್ತು ಆರೈಕೆಯನ್ನು ಮಕ್ಕಳ ತಜ್ಞೆ ಡಾ.ಆರುಷಿ ನಿರ್ವಹಿಸಿದರು. ಶುಶ್ರೂಷಕಿ ದೀಪಾ ಸಹಾಯಕರಾಗಿ ಸಕಾಲಿಕವಾಗಿ ಕರ್ತವ್ಯ ನಿರ್ವಹಿಸಿದರು.