ಮಂಗಳೂರು: ಪುತ್ತೂರಿನಲ್ಲಿ ಸಂತ್ರಸ್ತೆ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ
ಸಾಬೀತಾದರೂ ಈಕೆಯನ್ನು ವಿವಾಹನವಾಗಲು ಇನ್ನೂ ಒಪ್ಪುತ್ತಿಲ್ಲ. ಲಕ್ಷಾಂತರ ರೂ. ಪರಿಹಾರ ನೀಡಿ ಪ್ರಕರಣ ಮುಗಿಸಲು ಹೇಳುತ್ತಿದ್ದಾರೆ. ಆದ್ದರಿಂದ ನ್ಯಾಯಾಲಯ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸಂತ್ರಸ್ತೆಯ ತಾಯಿ ಹಾಗೂ ಮಗು ಸಹಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಸಂಧಾನ ಮಾಡುವ ಪ್ರಶ್ನೆಯೇ ಇಲ್ಲ. ಸದ್ಯ ಅತಂತ್ರ ಸ್ಥಿತಿಯಲ್ಲಿ ಇರುವ ಮಗುವಿಗೆ ಕಲ್ಲಡ್ಕದಲ್ಲಿ ಜನವರಿ 24ರಂದು ನಾಮಕರಣ ಶಾಸ್ತ್ರ ನೆರವೇರಿಸಲು ನಿರ್ಧಾರ ಮಾಡಲಾಗಿದೆ. ಆತ ತಾಳಿ ಕಟ್ಟುವ ತನಕ ಹೋರಾಟ ನಡೆಸುತ್ತೇವೆ ಎಂದರು.
ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳವನ್ನು ಆತ ವಿವಾಹವಾಗಿ ವಿಚ್ಛೇದನ ನೀಡುತ್ತಾನಂತೆ. ಅಲ್ಲದೆ ಈ ವೇಳೆ 50 ಲಕ್ಷ ರೂ. ಪರಿಹಾರ ನೀಡುತ್ತಾನಂತೆ, ಮೊದಲಿನ ಕೇಸ್‌ಗಳನ್ನೆಲ್ಲ ವಾಪಸ್ ಪಡೆಯಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ್ದಾರೆ. ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಹಾಗಾದರೆ ವಿವಾಹವಾದರೆ ನಾನೇ ಅವನಿಗೆ 50 ಲಕ್ಷ ರೂ. ಕೊಡುತ್ತೇನೆ. ಆತ ಮನೆ ಅಳಿಯನಾಗಿ ಬರಲಿ ಎಂದು ಸವಾಲು ಹಾಕಿದರು.
ಕರಾವಳಿಯಲ್ಲಿ ಹಿಂದು ಸಮಾಜದ ಬಗ್ಗೆ ಮುಖಂಡರು, ರಾಜಕೀಯ ನೇತಾರರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಂತಹ ಸನ್ನಿವೇಶದಲ್ಲಿ ಸಿಲುಕಿದವರನ್ನು ಪಾರು ಮಾಡುವ ಬಗ್ಗೆ ನೆರವಿಗೆ ಧಾವಿಸುತ್ತಿಲ್ಲ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ. ಇದೇ ಕಾರಣಕ್ಕೆ ಜ.24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರು ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ ಅಲ್ಲ, ಆಕೆಯೂ ನಿತ್ಯವೂ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯೋಚಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.