ಪುತ್ತೂರು ತಾಲೂಕುಮಟ್ಟದ ಪ್ರಜಾಸೇವೆ ಆಂದೋಲನವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫರೀದ್ ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಎಸ್‌ಪಿ ಡಾ.ಅರುಣ್ ಕೆ., ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಇದ್ದರು.
- ಸಚಿವ ಖಾದರ್ ಸಲಹೆ
- ಪುತ್ತೂರು ತಾಲಾಕುಮಟ್ಟದ ಪ್ರಜಾಸೇವೆ ಆಂದೋಲನ
ಪುತ್ತೂರು: ಜನರ ದೂರುಗಳಿಗೆ ೨೧ ದಿನದಲ್ಲಿ ಪರಿಹಾರ ಸಿಗಬೇಕೆಂಬ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೨೦-೩೦ ವರ್ಷಗಳಿಂದ ಆಗದ ಕೆಲಸಗಳು ಈಗ ನಡೆಯುತ್ತಿವೆ. ಕಾನೂನು ಆಗಲೂ ಈಗಲೂ ಒಂದೇ ಆಗಿದ್ದು, ಈ ನಿಟ್ಟಿನಲ್ಲಿ ಅಽಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧಿಕಾರಿಗಳಲ್ಲಿ ತಾಳ್ಮೆ, ಸಹನೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫರೀದ್ ಹೇಳಿದರು.
ಪುರಭವನದಲ್ಲಿ ಶನಿವಾರ ಪುತ್ತೂರು ತಾಲೂಕುಮಟ್ಟದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಕೆಲಸಗಳನ್ನು ಮಾಡಲು ಬದ್ಧವಾಗಿದೆ. ಸರ್ಕಾರದ ಕೆಲಸಗಳು ಜನರ ಬಳಿಗೆ ತಲುಪಬೇಕೆಂಬುದು ಮುಖ್ಯಮಂತ್ರಿಗಳ ಆಶಯವಾಗಿದ್ದು ಅದರಂತೆ ಪ್ರಜಾಸೇವೆ ಆಂದೋಲನ ನಡೆಸಲಾಗುತ್ತಿದೆ. ಜನರ ಕೆಲಸ ಕಾರ್ಯಗಳು ಪಾರದರ್ಕವಾಗಿ ನಡೆಯಬೇಕು, ಮಧ್ಯವರ್ತಿಗಳಿಲ್ಲದೆ ಅರ್ಜಿಗಳು ಇತ್ಯರ್ಥವಾಗಬೇಕು. ಅಽಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ಸಹನೆಯಿಂದ ಮಾಡಬೇಕು. ಗ್ರಾಮದಲ್ಲಿ ಯುವಕರ ಸಂಘಟನೆಗಾಗಿ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿನ ಕೆಲಸ ಕೆಲವೇ ದಿನದಲ್ಲಿ ನಡೆಯಲಿದೆ. ಉತ್ತಮ ಕೆಲಸ ಮಾಡಲು ಕ್ಷೇತ್ರದ ಜನರಿಂದ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಪ್ರಜಾಸೇವೆ ನಡೆಸಲಾಗುತ್ತಿದೆ. ಜನರು ಕಚೇರಿಗಳಿಗೆ ಅಲೆದಾಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಪರಿಹಾರ ನೀಡಲಾಗುತ್ತಿದೆ ಎಂದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕರ್ಭಾರಿ, ಉಪ ಮುಖ್ಯ ಸಂರಕ್ಷಣಾಧಿಕಾರಿ ರವಿಶಂಕರ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್ ಉಪಸ್ಥಿತರಿದ್ದರು.
ತಹಸೀಲ್ದಾರ್ ಎಸ್.ಬಿ.ಕೂಡಲಗಿ ಸ್ವಾಗತಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವಂದಿಸಿದರು. ಬಾಲಕೃಷ್ಣ ಪೊರ್ದಾಳ, ಶ್ರೀಕಲಾ ಕಾರಂತ್ ಎರುಂಬು ಕಾರ್ಯಕ್ರಮ ನಿರೂಪಿಸಿದರು.
ಅಹವಾಲು ಸ್ವೀಕಾರ
ವಿವಿಧ ಇಲಾಖೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕಂದಾಯ ೬೧, ಗ್ರಾಮೀಣಾಭಿವೃದ್ಧಿ ೨೨, ಸರ್ವೇ ವಿಭಾಗದಲ್ಲಿ ೨೦, ಗೃಹ ಇಲಾಖೆ ೧೩ ದೂರು ಸೇರಿ ಪ್ರಜಾಸೇವೆಯ ೧೬೩ ಅರ್ಜಿಗಳು ಸಲ್ಲಿಕೆಯಾದವು. ದೂರುದಾರರಿಂದ ಅಹವಾಲು ಸ್ವೀಕರಿಸಲಾಯಿತು.