ಪಿಲಿಕುಳ 
ದಕ್ಷಿಣ ಕನ್ನಡ

ಪಿಲಿಕುಳ ಪ್ರಾಣಿಗಳಿಗೆ ಆಹಾರದಲ್ಲಿ ವಿಷ ಬೆರಕೆ

ಪಿಲಿಕುಳದ ಜೀವವೈವಿದ್ಯಗಳಿಗೆ ಆಹಾರ ಪೂರೈಕೆಯ ಟೆಂಡರ್ ಕಳೆದುಕೊಂಡ ಟೆಂಡರ್‌ರ್‌ದಾರರು ಇಡೀ ಪಿಲಿಕುಳದ ಪ್ರಾಣಿಗಳಿಗೆ ವಿಷ ನೀಡುವಂತೆ ಡೀಲ್ ನಡೆಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಪಿಲಿಕುಳ ಹಗರಣದ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಿರುವ ಮಹತ್ತರ ದಾಖಲೆ ವಿಜಯವಾಣಿಗೆ ಲಭ್ಯವಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 120ಕ್ಕೂ ಹೆಚ್ಚು ವಿವಿಧ ಪ್ರಬೇದಗಳ ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 40 ಪ್ರಬೇದಗಳ ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿವೆ. ಒಟ್ಟಾರೆಯಾಗಿ ಪ್ರಸ್ತುತ 1024 ಪ್ರಾಣಿ ಪಕ್ಷಿಗಳು ವಾಸ್ತವ್ಯವಿದ್ದು, ಇದರ ಆರೋಗ್ಯ ಸ್ಥಿತಿಗತಿಗಳನ್ನು ನೋಡಿಕೊಳ್ಳಲು ಕೇವಲ ಒಬ್ಬ ಪ್ರಾಣಿ ವೈದ್ಯರು ಮಾತ್ರ ಕರ್ತವ್ಯದಲ್ಲಿದ್ದಾರೆ. ಈ ಹಿಂದೆ ಪಿಲಿಕುಳದ ನಿರ್ದೇಶಕರಾಗಿದ್ದ ಜಯಪ್ರಕಾಶ್ ಭಂಡಾರಿ ಅವರ ಆಪ್ತರಾಗಿದ್ದ ಬಿಎ ಖಾದರ್ ಎಂಬ ಗುತ್ತಿಗೆದಾರರಿಗೆ ಪಾರದರ್ಶಕರಹಿತವಾಗಿ 2015ರಿಂದ 2025ರ ವರೆಗೆ ನೀಡಲಾಗಿತ್ತ್ತು. ಆರಂಭದಲ್ಲಿ ವಾರ್ಷಿಕ 25 ಲಕ್ಷ ರೂ. ಇದ್ದ ಟೆಂಡರ್ ಮೊತ್ತ 2025ರ ವೇಳೆಗೆ ವಾರ್ಷಿಕ 2 ಕೋ.ರೂಗೆ ತಲುಪಿತು. ಆದರೆ ಟೆಂಡರ್‌ದಾರರು ಸಮರ್ಪಕ ಆಹಾರ ಪೂರೈಸದ ಕಾರಣ ಪಿಲಿಕುಳದ ಜೀವ ವೈವಿದ್ಯವು ಹಸಿವಿನಿಂದ ಕಂಗೆಟ್ಟ ಸ್ಥಿತಿಯಲ್ಲಿತ್ತು.
*ಕೈತಪ್ಪಿದ ಟೆಂಡರ್-ಗುತ್ತಿಗೆ ಕುಟುಂಬ ಕಂಗಾಲು
ಈ ಹಿಂದೆ ದಕ್ಷ ಕೆಎಎಸ್ ಅಧಿಕಾರಿ ರಶ್ಮಿ ಅವರು ಪಿಲಿಕುಳದ ಆಡಳಿತ ಹೊಣೆಗಾರಿಕೆ ಸಂದರ್ಭ ಬಿಎ ಖಾದರ್ ಗುತ್ತಿಗೆದಾರರ ಟೆಕ್ನಿಕಲ್ ಬಿಡ್‌ನ್ನು ಪಿಲಿಕುಳ ಡೆವಲಪ್‌ಮೆಂಟ್ ಅಥಾರಿಟಿ ಪರಿಶೀಲಿಸದೆ ಇರುವುದನ್ನು, ಅಸಮರ್ಪಕ ಜಿಎಸ್‌ಟಿ ದಾಖಲಾತಿ, ಟ್ರೇಡ್ ಲೈಸೆನ್ಸ್, ಎಫ್‌ಎಸ್‌ಎಸ್‌ಎಐ ದಾಖಲಾತಿಗಳು, ಆಹಾರದ ಪ್ರಮಾಣ ಮತ್ತು ಪೂರೈಕೆ ಮಾಡಿದ ಬಿಲ್‌ಗಳಿಗೂ ವ್ಯತ್ಯಾಸಗಳನ್ನು ಪತ್ತೆಹಚ್ಚಿ ಬಿಲ್ ಮೊತ್ತವನ್ನು ತಡೆಹಿಡಿದಿದ್ದರು. ಮಾತ್ರವಲ್ಲದೆ ಪಾರದರ್ಶ್ಕ ರೀತಿಯಲ್ಲಿ ಹೊಸ ಇ-ಪ್ರಕ್ರೂರ್‌ಮೆಂಟ್ ಟೆಂಡರ್ ನಡೆಸಲು ನಿರ್ದೇಶಿಸಿದ್ದರು. ಇವರ ವರ್ಗಾವಣೆ ಬಳಿಕ ಇವರ ಆದೇಶವನ್ನು ಗಾಳಿಗೆ ತೂರಲಾಗಿತ್ತು. ಬಿ.ಎ. ಖಾದರ್ 2025ರ ಜೂನ್ ತಿಂಗಳಿನಲ್ಲಿ ಮೃತಪಟ್ಟಿದ್ದು, ನಂತರವೂ ಕೂಡ ಆತನ ಕುಟುಂಬದವರಿಗೆ ಆಹಾರ ಪೂರೈಕೆಯ ಗುತ್ತಿಗೆ ನೀಡಲಾಗಿತ್ತು. ತಕರಾರು ಬಂದ ಹಿನ್ನೆಲೆಯಲ್ಲಿ ಹೊಸ ಇ-ಪ್ರಕ್ರೂರ್ ಮೆಂಟ್ ಟೆಂಡರ್ ನಡೆಸಲಾಗಿದ್ದು, 2025ರ ಆಗಸ್ಟ್ 1ರಿಂದ ಮುಂದಿನ 1 ವರ್ಷದ ಅವಧಿಗೆ ಕೇವಲ 99 ಲಕ್ಷ ರೂ.ಗೆ ಬಳ್ಳಾರಿ ಮೂಲದ ಮಾಷ ಅಲ್ಲಾ ಮೀಟ್ ಸಪ್ಲೇಯರ್‌ಗೆ ಆಹಾರ ಪೂರೈಕೆಯ ಟೆಂಡರ್ ಪಡೆದುಕೊಂಡಿತ್ತು. ಟೆಂಡರ್ ಕೈತಪ್ಪದ ಹಿನ್ನೆಲೆಯಲ್ಲಿ ಬಿ.ಎ. ಖಾದರ್ ಕುಟುಂಬ ಕಂಗಾಲಾಗಿದ್ದು, ಹೊಸ ಗುತ್ತಿಗೆದಾರರಿಗೆ ಬೆದರಿಕೆಯನ್ನೂ ಹಾಕಿದ ಘಟನೆಯೂ ನಡೆದಿತ್ತು.

ಆಹಾರದಲ್ಲಿ ವಿಷ ಬೆರಕೆಗೆ ಮಾಸ್ಟ್‌ರ್ ಪ್ಲಾೃನ್

ಈ ಹಿಂದೆ ಸುಮಾರು 20-25 ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ದಿ. ಖಾದರ್ ರವರ ಸಂಬಂಧಿಯಾದ ಅಬ್ಬಾಸ್ ಹನೀಫ್ ಎಂಬವರುಗಳು ಪ್ರಸ್ತುತ ಇರುವ ಟೆಂಡರ್‌ನ್ನು ತಿರಸ್ಕೃತಗೊಳಿಸಲು ಪ್ರಾಣಿಗಳ ಆರೈಕೆ ಮಾಡುವ ಹರೀಶ್ ಎಂಬುವರಿಗೆ ದೂರವಾಣಿ ಕರೆ ಮಾಡಿ ಪ್ರಾಣಿಗಳಿಗೆ ನೀಡುವ ಮಾಂಸದಲ್ಲಿ ವಿಷ ಬೆರಕೆ, ಕೊಳೆತ ಮಾಂಸವನ್ನು ಸೇರಿಸುವಂತೆ ಆಮಿಷದ ಒತ್ತಡ ನೀಡಿದ್ದರು. ಈಬಗ್ಗೆ ಪಿಲಿಕುಳದ ವೈದ್ಯಾಧಿಕಾರಿ ಡಾ. ದಿವ್ಯಾ ಗಣೇಶ್ ಜಿಲ್ಲಾಧಿಕಾರಿಗಳ ನಿರ್ಧೆಶನದಂತೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದಾಖಲೆ ಪರಿಶೀಲಿಸಿದ ಪೊಲೀಸರು ಅಬ್ಬಾಸ್ ಹಾಗೂ ಅನೀಫ್ ಎಂಬರ ಮೇಲೆ ಎಫ್‌ಐಆರ್ ಹಾಕಿದೆ. ಈಬಗ್ಗೆ ಲೋಕಾಯುಕ್ತ ವರದಿಯಲ್ಲೂ ಉಲ್ಲೇಖಿಸಲಾಗಿದೆ.

ಆರೋಪಿಗಳಿಂದ ಮತ್ತೆ ಆಹಾರ ಪೂರೈಕೆ

ಪಿಲಿಕುಳದ ಮುಗ್ದ ಪ್ರಾಣಿಗಳ ಆಹಾರದಲ್ಲಿ ವಿಷ ಬೆರಕೆ ಪ್ರಕರಣದ ಆರೋಪಿಗಳಿಗೆ ಮತ್ತೆ ಆಹಾರ ಪೂರೈಕೆಯ ಉಪಗುತ್ತಿಗೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, 2026ರ ಜನವರಿ ವರೆಗಿನ ಲಕ್ಷಾಂತರ ರೂ.ಗಳ ಬಿಲ್ ಪಾವತಿಯ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ. ಇಡೀ ಪ್ರಕರಣದಲ್ಲಿ ಪಿಲಿಕುಳದ ಹಾಲಿ ಹಾಗೂ ಮಾಜಿ ನಿರ್ದೇಶಕರು, ವೈದ್ಯಾಧಿಕಾರಿಗಳು, ಆಡಳಿತ ಮಂಡಳಿ, ಜಿಲ್ಲಾಧಿಕಾರಿ ಕಚೇರಿಯ ಕೆಲವು ಅಧಿಕಾರಿಗಳು ಶಾಮಿಲಾಗಿರುವ ಗುಮಾನಿ ಎದ್ದಿದೆ.