ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ‘ಎಕ್ಸ್ವೈಝಡ್ ಏರ್ಲೈನ್ಸ್’ಗೆ ಸೇರಿದ 117 ಮಂದಿ ಪ್ರಯಾಣಿಸುತ್ತಿದ್ದ ವಿಮಾನವು ಶುಕ್ರವಾರ ಬೆಳಗ್ಗೆ 10.20ರ ಸುಮಾರಿಗೆ ವಿಮಾನ ನಿಲ್ದಾಣದ ಹೊರವಲಯದ ಗುರುಪುರ ನದಿ ತಟದಲ್ಲಿ ಪತನಗೊಂಡ ಪರಿಣಾಮ 9 ಮಂದಿ ಮೃತಪಟ್ಟು, 108 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದು ವಿಮಾನ ಅಪಘಾತ ಸಂಭವಿಸಿದರೆ ವಿವಿಧ ರಕ್ಷಣಾ ಪಡೆಗಳು ಮತ್ತು ಜಿಲ್ಲಾಡಳಿತ ಎಷ್ಟು ಕ್ಷಿಪ್ರವಾಗಿ ಕಾರ್ಯನಿರ್ವಹಿಸಬಲ್ಲವು ಎಂಬುದನ್ನು ಪರೀಕ್ಷಿಸುವ ನಿಟ್ಟಿನಲ್ಲಿ ನಡೆದ ಕಲ್ಪಿತ ಕಾರ್ಯಾಚರಣೆ. ನವದೆಹಲಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಾದ ರವೀಂದರ್ ಗುರಂಗ್ ಹಾಗೂ ಕಿಶನ್ ಸಿಂಗ್ ಮೆಹರಾ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ವೀಕ್ಷಿಸಿತು ಎಂದು ಜಿಲ್ಲಾಡಳಿತದಿಂದ ನಿಯೋಜಿಸಲಾದ ಇನ್ಸಿಡೆಂಟ್ ಕಮಾಂಡರ್ ಶ್ರೀಧರ್ ಅವರು ಮಾಹಿತಿ ನೀಡಿದರು.
ವಿಮಾನ ನಿಲ್ದಾಣದಿಂದ ರನ್ವೇ 24ರಿಂದ ಮಂಗಳೂರು-ಮುಂಬೈ ಮಾರ್ಗದ ದೇಶೀಯ ವಿಮಾನವು ಬೆಳಗ್ಗೆ 9.55ಕ್ಕೆ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ 1ನೇ ಎಂಜಿನ್ನಲ್ಲಿ ತೀವ್ರ ಕಂಪನ ಕಾಣಿಸಿಕೊಂಡಿದೆ. ಬಳಿಕ ಎಂಜಿನ್ ಬೆಂಕಿಯ ಎಚ್ಚರಿಕೆ ನೀಡಿದೆ. ಈ ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ 117 ಮಂದಿ ಪ್ರಯಾಣಿಸುತ್ತಿದ್ದರು. ಎಂಜಿನ್ ಶಕ್ತಿ ಮತ್ತು ನೂಕುಬಲ ಕಳೆದುಕೊಂಡ ವಿಮಾನವು ಗುರುಪುರ ನದಿಯ ಸಮೀಪ ದುರ್ಗಮ ಅರಣ್ಯ ಪ್ರದೇಶದಲ್ಲಿ ಪತನಗೊಂಡ ಸನ್ನಿವೇಶ ಸೃಷ್ಟಿಸಲಾಗಿತ್ತು.
ತಕ್ಷಣವೇ ಎಟಿಸಿ ಹಾಗೂ ಎಒಸಿಸಿ ಮೂಲಕ ತುರ್ತು ಸಂದೇಶ ರವಾನೆಯಾಗಿ, 10.22ಕ್ಕೆ ವಿಮಾನ ನಿಲ್ದಾಣದ ತುರ್ತು ಸ್ಪಂದನಾ ತಂಡಗಳು ಕಾರ್ಯಪ್ರವೃತ್ತವಾದವು. 10.31ಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಕ್ಷಣವೇ ‘ಆಫ್-ಸೈಟ್ ತುರ್ತು ಯೋಜನೆ’ಯನ್ನು ಜಾರಿಗೊಳಿಸಲಾಯಿತು. 10.37ಕ್ಕೆ ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದರೆ, 10.44ಕ್ಕೆ ಪರಿಹಾರ ಶಿಬಿರವನ್ನು ಸ್ಥಾಪಿಸಲಾಯಿತು.
ಅಪಘಾತದ ವೇಳೆ ಕೆಲ ಪ್ರಯಾಣಿಕರು ಪ್ರಾಣರಕ್ಷಣೆಗಾಗಿ ಗುರುಪುರ ನದಿಗೆ ಹಾರಿದ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ತಕ್ಷಣವೇ ಕಾರ್ಯಾಚರಣೆಗಿಳಿದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ನದಿಯಲ್ಲಿ ಶೋಧ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದವು. 10.56ರ ಸುಮಾರಿಗೆ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಪತ್ತೆಹಚ್ಚಿ ಇನ್ಸಿಡೆಂಟ್ ಕಮಾಂಡರ್ ಅವರಿಗೆ ಹಸ್ತಾಂತರಿಸಲಾಯಿತು.
ಸ್ಥಳದಲ್ಲೇ ‘ಇನ್ಸಿಡೆಂಟ್ ಕಮಾಂಡ್ ಪೋಸ್ಟ್’ ಹಾಗೂ ವೈದ್ಯಕೀಯ ಕೇಂದ್ರವನ್ನು ತೆರೆದು ಗಾಯಾಳುಗಳನ್ನು ತೀವ್ರತೆಗೆ ಅನುಗುಣವಾಗಿ ವರ್ಗೀಕರಿಸಲಾಯಿತು. ತೀವ್ರವಾಗಿ ಗಾಯಗೊಂಡವರನ್ನು ಮೊದಲ ಆದ್ಯತೆಯಲ್ಲಿ ಗ್ರೀನ್ ಕಾರಿಡಾರ್ ಮೂಲಕ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತು. ಮಧ್ಯಮ ಸ್ವರೂಪದ ಗಾಯಾಳುಗಳನ್ನು ಎರಡನೇ ಆದ್ಯತೆಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೂರನೇ ಆದ್ಯತೆಯಾಗಿ ಸಣ್ಣಪುಟ್ಟ ಗಾಯಗೊಂಡವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ನದಿಯಲ್ಲಿ ಪತ್ತೆಯಾದ ಇಬ್ಬರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುವುದಾಗಿ ದಾಖಲಿಸಿ, ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗೆ ರವಾನಿಸಲಾಯಿತು.
ವಿಮಾನ ನಿಲ್ದಾಣದ ಹೊರವಲಯದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸಂಪೂರ್ಣ ಸಹಕಾರದೊಂದಿಗೆ ಜಿಲ್ಲಾಡಳಿತ ಮೇಲುಸ್ತುವಾರಿ ವಹಿಸಿತು. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಅಥವಾ ವಾಯುಪಡೆಯ ನೆರವು ಅಗತ್ಯವಿದ್ದಲ್ಲಿ ಬಳಸಿಕೊಳ್ಳುವ ಸನ್ನದ್ಧತೆಯನ್ನೂ ಪರೀಕ್ಷಿಸಲಾಯಿತು.
ಅಪಘಾತ ಸ್ಥಳದಲ್ಲಿ ಅಗ್ನಿಶಾಮಕ ದಳ, ಜೆಸಿಬಿ ಯಂತ್ರೋಪಕರಣಗಳನ್ನು ಸನ್ನದ್ಧವಾಗಿರಿಸಲಾಗಿತ್ತು. ಮೆಸ್ಕಾಂ (ವಿದ್ಯುತ್ ಇಲಾಖೆ) ಸ್ಥಳದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಆಡಳಿತ ನದಿಯಲ್ಲಿ ತೈಲ ಸೋರಿಕೆಯಾಗದಂತೆ ನಿಗಾ ವಹಿಸಿದವು. ಗಾಯಾಳುಗಳ ತ್ವರಿತ ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಗಳಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎನ್ ಡಿಆರ್ ಎಫ್ ನ 30 ಮಂದಿ, ಎಸ್ ಡಿಆರ್ ಎಫ್ ನ 25 ಮಂದಿ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 60 ಮಂದಿ, 120 ಮಂದಿ ಪೊಲೀಸ್, 6 ವೈದ್ಯಕೀಯ ತಂಡಗಳು, ನಸಿರ್ಂಗ್ ಸಿಬಂದಿ, ಆಂಬುಲೆನ್ಸ್, ವಿವಿಧ ಕಂಪೆನಿಗಳ ಅಗ್ನಿಶಾಮಕ ವಾಹನಗಳು ಮತ್ತು ಸಿಬಂದಿ, ಜಿಲ್ಲಾಡಳಿತ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗಾಯಾಳುಗಳಾಗಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಹಕರಿಸಿದರು.
ಕಾರ್ಯಾಚರಣೆಯ ಬಳಿಕ ನಡೆದ ಪರಿಶೀಲನಾ ಸಭೆಯಲ್ಲಿ ಎನ್ಡಿಎಂಎ ಅಧಿಕಾರಿಗಳು ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಅವಲೋಕಿಸಿದರು. ಆಸ್ತಿಗಿಂತ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಈ ತಾಲೀಮಿನಲ್ಲಿ ಕಂಡುಬಂದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ವಿಪತ್ತು ನಿರ್ವಹಣಾ ಅಧಿಕಾರಿ ಪ್ರೊ.ಶ್ರೀನಿಕೇತನ್ ತಿಳಿಸಿದರು.