ಮಂಗಳೂರು: ಮೀನಿನ ಖಾದ್ಯಗಳ ಘಮಲು, ನಾಲಿಗೆಗೆ ರುಚಿಯ ಸೊಬಗು, ಮನಸಿಗೆ ಹಬ್ಬದ ಸಂಭ್ರಮ. ಒಂದೆಡೆ ರೋಹು, ಕಾಟ್ಲಾ, ಅಂಜಲ್, ಬಂಗುಡೆ, ಪಾಂಪ್ಲೆಟ್ನ ವೈವಿಧ್ಯಮಯ ಖಾದ್ಯಗಳ ಸವಿರುಚಿ; ಮತ್ತೊಂದೆಡೆ ತಾಜಾ ಮೀನು ಖರೀದಿಯ ಉತ್ಸಾಹ.
ಮಂಗಳೂರಿನ ಪಿಲಿಕುಳ ಲೇಕ್ ಗಾರ್ಡನ್ನಲ್ಲಿ ಭಾನುವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಪಿಲಿಕುಳ ಮತ್ಸೊೃೀತ್ಸವ ಮತ್ತು ಮೀನು ಆಹಾರ ಮೇಳಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಹಿ ನೀರಿನ ಮೀನುಗಳು, ಪಾಂಪ್ಲೆಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸು ಹಾಗೂ ಇನ್ನಿತರ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟ ನಡೆಯಿತು. ಸಮುದ್ರ ಮೀನುಗಳ ಫ್ರೈ, ಫಿಶ್ ಮಸಾಲಾ, ಫಿಶ್ ಕಬಾಬ್ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಯಿತು. ಮೀನು ಪ್ರಿಯರು ತಾ ಮುಂದು ತಾ ಮುಂದು ಎನ್ನುತ್ತಾ ಖರೀದಿಸಿ ಸವಿದು ಖುಷಿ ಪಟ್ಟರು.
ಪಿಲಿಕುಳದ ಲೇಕ್ ಗಾರ್ಡನ್ನ ಕೆರೆಗೆ ಕಾಟ್ಲಾ, ರೋಹು,ತಿಲೇಪಿಯಾ ಮೊದಲಾದ 20 ಸಾವಿರ ಮೀನು ಮರಿಗಳನ್ನು ಬಿಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅವರು ಮೀನು ಮರಿಗಳನ್ನು ಕೆರೆಗೆ ಬಿಡುವ ಮೂಲಕ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ರಾಜು ಕೆ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ (ಪ್ರಭಾರ) ಡಾ.ಅರುಣ್ ಕುಮಾರ್ ಶೆಟ್ಟಿ, ಕೆಎಫ್ಡಿಸಿ ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್, ಪ್ರಾಧಿಕಾರದ ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವರಾಮ ಮಲ್ಲಿ, ಎನ್.ಜಿ.ಮೋಹನ್, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷ ಡಾ.ಜಿ.ಶ್ರೀನಿಕೇತನ್, ಆಡಳಿತಾಧಿಕಾರಿ ಡಾ.ಅಶೋಕ್ ಕೆ.ಆರ್., ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ್, ಸಸ್ಯಶಾಸ್ತ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ, ಗುತ್ತುಮನೆ ಮತ್ತು ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್ ಮೊದಲಾದವರಿದ್ದರು. ಜಗನ್ನಾಥ್ ನಿರ್ವಹಿಸಿದರು. ರಾಮಕೃಷ್ಣ ಮರಾಟಿ ವಂದಿಸಿದರು. ಉದಯ ಕುಮಾರ್ ಶೆಟ್ಟಿ, ನಾಗೇಶ್ ಕುಲಾಲ್ ಸಹಕರಿಸಿದರು.
ಪಿಲಿಕುಳ ಕೆರೆಯಿಂದ ಹಿಡಿದ ಕಾಟ್ಲಾ, ರೋಹು, ತಿಲೇಪಿಯಾ ಮೊದಲಾದ ಜಾತಿಯ ಒಟ್ಟು 1700 ಕಿ.ಗ್ರಾಂ. ಮೀನು ಹಿಡಿಯಲಾಗಿದೆ. 8 ಕೆ.ಜಿ. ಗರಿಷ್ಠ ತೂಕ ಹೊಂದಿತ್ತು. ಉಳಿದಂತೆ 2 ಕಿ.ಗ್ರಾಂ.ನಿಂದ ಮೇಲ್ಪಟ್ಟವು. ಕಿ.ಗ್ರಾಂ.ಗೆ 160 ರೂ. ದರದಲ್ಲಿ ಮಾರಾಟ ಮಾಡಲಾಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಹಿಡಿದ ಮೀನು ಖಾಲಿಯಾಯಿತು. ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಗಮಿಸಿ ಮೀನು ಖರೀದಿಸಿ ಕೊಂಡೊಯ್ದರು. ಸಮುದ್ರದ ಮೀನಿನ ಖಾದ್ಯಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಯಿತು. ಮೀನು ಮರಿಗಳ ಮಾರಾಟವೂ ನಡೆಯಿತು.
ನೈಲಾನ್ ಹಾಗೂ ಪ್ಲಾಸ್ಟಿಕ್ ಬಲೆ ಹಾಕಿ ಮೀನು ಹಿಡಿಯುತ್ತೇವೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ತೆಪ್ಪದಲ್ಲಿ ತೆರಳಿ ಬಲೆ ಹಾಕಿದ್ದೇವೆ. ಬಲೆಗೆ ಮೀನು ಬಿದ್ದ ಹಾಗೆ ದಡದ ಬಳಿಗೆ ತಂದು ನೀರಿನಲ್ಲೇ ಇಡುತ್ತೇವೆ. ಮಾರಾಟ ಮಾಡುವ ಸಂದರ್ಭ ನೀರಿನಿಂದ ಮೇಲಕ್ಕೆ ತರುತ್ತೇವೆ. ನಾಲ್ಕೈದು ಜನರ ತಂಡ ಬಂದಿದ್ದೇವೆ.
ನೈಸರ್ಗಿಕವಾಗಿ ಪಿಲಿಕುಳ ಕೆರೆಯಲ್ಲಿ ಬೆಳೆದ ತಾಜಾ ಮೀನುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮತ್ಸ್ಯೋತ್ಸವ ಆಯೋಜಿಸಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಿಡಿದ ಮೀನುಗಳು ಎಲ್ಲವೂ ಖಾಲಿಯಾಗಿವೆ. ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿದ್ದೇವೆ.
ಮತ್ಸ್ಯೋತ್ಸವ ಉತ್ತಮ ಪರಿಕಲ್ಪನೆ. ನಗರದ ಜನತೆಗೆ ಸಿಹಿ ನೀರು ಮೀನು ಅಪರೂಪವಾದ್ದರಿಂದ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ. ಪಿಲಿಳದಲ್ಲಿ ಇಂತಹ ಉತ್ಸವಗಳನ್ನು ಆಯೋಜಿಸಿ ಈ ಪ್ರವಾಸಿ ತಾಣಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವಂತೆ ಮಾಡಬೇಕು.