ಮಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಸಾಕಷ್ಟು ಮಂದಿ ಹೊರ ಜಿಲ್ಲೆಯವರು ದ.ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೇ.15ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಾಗದಂತೆ ನೋಡಿಕೊಂಡು ಹಂತ ಹಂತವಾಗಿ ವರ್ಗಾವಣೆ ಮಾಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮದ ಜತೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಪೊಲೀಸ್ ಸಿಬಂದಿಯವರ ಕುಟುಂಬದವರು ವರ್ಗಾವಣೆ ವಿಚಾರದಲ್ಲಿ ಮನವಿ ನೀಡಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಡಿಜಿಪಿ ಸಲೀಂ ಹೇಳಿದರು.
ವರ್ಗಾವಣೆಗೆ ಆಗ್ರಹಿಸಿ ಡಿಜಿಪಿಗೆ ಮನವಿ
ಜಿಲ್ಲೆಯಲ್ಲಿ 10 ವರ್ಷ ಸೇವೆ ಪೂರ್ವಗೊಂಡು, ವರ್ಗಾವಣೆ ಆದೇಶವಾಗಿ ನಾಲ್ಕು ತಿಂಗಳಾದರೂ ಯಾರಿಗೂ ಬೇರೆ ಜಿಲ್ಲೆಗೆ ನಿಯುಕ್ತಿಗೊಳಿಸಿಲ್ಲ. ಕೋಮುಗಲಭೆ ಕಾರಣ ಹೇಳಿ ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿಲ್ಲ ಎಂದು ಪೊಲೀಸ್ ಸಿಬಂದಿಯವರ ಮನೆಯವರು ಡಿಜಿಪಿ ಡಾ.ಸಲೀಂ ಅವರ ಬಳಿ ಅಳಲು ತೋಡಿಕೊಂಡು ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ, ಪೊಲೀಸ್ ಸಿಬ್ಬಂದಿ ಕುಟುಂಬಸ್ಥೆ ಶಿಲ್ಪಾ ಎನ್ನುವವರು, ಉತ್ತರ ಕರ್ನಾಟಕದವರಾದ ನಮಗೆ ಕರಾವಳಿಯ ಹವಾಮಾನ ಸರಿ ಹೊಂದುತ್ತಿಲ್ಲ. 10 ವರ್ಷಗಳಿಂದ ಇಲ್ಲಿದ್ದು, ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿದೆ. ಊರಿನಲ್ಲಿ ಹಿರಿಯರಿದ್ದಾರೆ. ಅವರ ಕಾಳಜಿಯೂ ನಮ್ಮ ಮೇಲಿದೆ. ವರ್ಷದ ಮಧ್ಯದಲ್ಲಿ ಬಿಡುಗಡೆ ಮಾಡಿದರೆ ಮಕ್ಕಳ ಶಾಲಾ ದಾಖಲಾತಿಗೂ ಸಮಸ್ಯೆಯಾಗಲಿದೆ ಎಂದರು.
ನಮ್ಮ ಸಮಸ್ಯೆ ಬಗ್ಗೆ ಡಿಜಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. ಬಗೆಹರಿಯದಿದ್ದರೆ, ಮಂಗಳೂರಿನಿಂದ ಪಾದಯಾತ್ರೆ ಮೂಲಕ ತೆರಳಿ ಡಿಜಿಪಿ, ಗೃಹ ಸಚಿವರನ್ನು ಭೇಟಿ ಆಗುತ್ತೇವೆ ಎಂದು ಶ್ರೀದೇವಿ ಪ್ರತಿಕ್ರಿಯಿಸಿದರು.
ದ.ಕನ್ನಡ ಕಾನೂನು ಸುವ್ಯವಸ್ಥೆ ಉತ್ತಮ
ನಗರ ಪೊಲೀಸ್ ಕಮಿಷನರ್ ವ್ಯಾಪ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಕಳೆದ ಒಂದು ವರ್ಷದಿಂದ ಇಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಶಾಂತಿ ಸುವ್ಯವಸ್ಥೆ ನೆಲೆಸಿದೆ. ಇದನ್ನೇ ಮುಂದುವರೆಸಿಕೊಂಡು ಹೋಗಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಡಾ.ಎಂ.ಎ.ಸಲೀಂ ಹೇಳಿದರು.
ಮಂಗಳೂರು ಪೊಲೀಸ್ ಕಮಿನಷರ್ ಸುಧೀರ್ ಕುಮಾರ್ ಹಾಗೂ ಕೆಲವು ಐಪಿಎಸ್ ಅಧಿಕಾರಿಗಳ ವಿರುದ್ಧ ಡಿಸಿಆರ್ ಇ ಬೆಂಗಳೂರು ನಗರ ವಲಯ ಎಸ್ಪಿ ಎಸ್.ಎಸ್. ಕಾಶಿ ಅವರು ಮಾಡಿರುವ ಆರೋಪದ ಕುರಿತ ಪ್ರಶ್ನೆಗೆ ಡಿಜಿಪಿ ಅವರು ಉತ್ತರಿಸಲು ನಿರಾಕರಿಸಿ, ಕಿರು ನಗೆ ಬೀರಿ ತೆರಳಿದರು.