ದಕ್ಷಿಣ ಕನ್ನಡ

ಎಸ್‌ಐಆರ್ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಮಂಗಳೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಮಂಗಳೂರು :ಎಸ್‌ಐಆರ್ ದತ್ತಾಂಶಗಳ ವಿಚಾರವಾಗಿ ಇಂದು ನಾವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಮತದಾನದ ಹಕ್ಕು ಬದುಕಿನ ಹಕ್ಕು. ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಮುಂದುವರಿಸುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಉಡುಪಿಯ ಉಚ್ಚಿಲ ಹಾಗೂ ಮಂಗಳೂರು ದಸರಾ ಉದ್ಘಾಟನೆಗೆ ಕರಾವಳಿ ಜಿಲ್ಲೆಗೆ ಆಗಮಿಸಿದ ಅವರು ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಪ್ರತಿಭಟನೆ ಮೆರವಣಿಗೆ ವೇಳೆ ರಾಹುಲ್ ಗಾಂಧಿ ಅವರು ನನಗೆ ವಾಹನದಲ್ಲಿ ಬರಲು ಹೇಳಿದ್ದನ್ನು ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ಇದು ದೊಡ್ಡ ಅಪಮಾನ ಎಂದು ಅಪಪ್ರಚಾರ ಮಾಡಿದರು. ನನ್ನನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದೇ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು. ಅವರ ಸಹಕಾರದಿಂದ ನಾವು ರಾಜ್ಯದಲ್ಲಿ ಮತದಾರರ ಹಕ್ಕು ಸಂರಕ್ಷಿಸುತ್ತಿದ್ದೇವೆ. ಬಿಜೆಪಿ ನಾಯಕರು ಇದರಲ್ಲಿ ಅಪಪ್ರಚಾರ ಮಾಡಿ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ. ಇಂತಹ ಸಣ್ಣ ವಿಚಾರವನ್ನು ಲಾಭಕ್ಕೆ ಬಳಸಿಕೊಳ್ಳುವುದು ಬೇಡ. ರಾಹುಲ್ ಗಾಂಧಿ ಅವರು ಮಾನವೀಯತೆ ಹೊಂದಿರುವ ನಾಯಕ ಎಂದು ತಿಳಿಸಿದರು.

ಕರಾವಳಿಯ ಕಂಬಳ ದಸರಾ ವಿಶೇಷ

ಕರಾವಳಿಯ ಕಂಬಳ ಹಾಗೂ ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ. ದಸರಾ ಸಂದರ್ಭದಲ್ಲಿ ಕುದ್ರೋಳಿಗೆ ಆಗಮಿಸುವಂತೆ ಬಹಳ ವರ್ಷಗಳಿಂದ ಜನಾರ್ದನ ಪೂಜಾರಿ ಅವರು ಆಹ್ವಾನ ನೀಡುತ್ತಲೇ ಇದ್ದರು. ಕಳೆದ ವರ್ಷ ಹಬ್ಬದ ಮಧ್ಯೆ ಬಂದಿದ್ದೆ. ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಾಜಗಳು, ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ನವರಾತ್ರಿಯಲ್ಲಿ ನವದುರ್ಗೆಯರಿಗೆ ಪ್ರಾರ್ಥಿಸಿ, ಸಾಂಸ್ಕೃತಿಕ ಬದುಕನ್ನು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ನಾಡ ಹಬ್ಬ ದಸರಾವನ್ನು ಮೈಸೂರಿನಲ್ಲಿ ಸರ್ಕಾರದ ಪರವಾಗಿ ಆಚರಿಸುತ್ತಿದ್ದೇವೆ. ಅ.21ರಂದು ವಿಜಯದಶಮಿಯಂದು ಕಾರ್ಯಕ್ರಮ ನಡೆಯಲಿದ್ದು, ತುಳುನಾಡಿನ ಪ್ರತಿನಿಧಿಗಳು ಕೂಡ ಆಗಮಿಸುತ್ತಿದ್ದಾರೆ. ಅನೇಕ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದ್ದು, ಪಥ ಸಂಚಲನದಲ್ಲಿ ನಮ್ಮ ಸೇನಾಪಡೆಗಳ ತಂಡಗಳು ಭಾಗವಹಿಸುತ್ತಿವೆ. ಈ ಬಾರಿ ಹೊಸ ಆನೆ ತಾಯಿ ಚಾಮುಂಡೇಶ್ವರಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದೆ ಎಂದರು.

ಕಂಬಳವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದೆ. ವಿಜಯನಗರ ಕಾಲದಲ್ಲಿ ದಸರಾ ಸಂದರ್ಭದಲ್ಲಿ ಕೋಣಗಳನ್ನು ಕರೆದುಕೊಂಡು ಬರುತ್ತಿದ್ದರು ಎಂಬ ಇತಿಹಾಸ ತಿಳಿದಿದ್ದೇನೆ. ಇದು ನಿಮ್ಮ ಹಬ್ಬ, ರಾಜ್ಯದ ಹಬ್ಬ ಎಂದರು.

ಸ್ಟಿಂಗ್ ವಿಚಾರದಲ್ಲಿ ಬಂಧನವಾಗಿರುವ ಬಗ್ಗೆ ಕೇಳಿದಾಗ, ನನಗೆ ಮಾಹಿತಿ ಇಲ್ಲ ಎಂದರು.