ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಟ್ಟುನಿಂತ ಲಿಫ್ಟ್.
ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಹೋಗಲು ವಯೋವೃದ್ಧರಿಗೆ ಅನೂಕೂಲವಾಗಲೆಂದು ನಿರ್ಮಿಸಿದ ಲಿಫ್ಟ್ ಕೆಲವೇ ಸಮಯದಲ್ಲಿ ಕೆಟ್ಟುಹೋಗಿದ್ದು ಸರಿಪಡಿಸಲಾಗದೆ ಹಾಗೇ ಉಳಿದಿದೆ.
2023ರಲ್ಲಿ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ದೇವಸ್ಥಾನಕ್ಕೆ ಬರುವ ಹಿರಿಯ ಭಕ್ತರಿಗೆ ಸಹಾಯವಾಗಲೆಂದು ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನೂತನ ಲಿಫ್ಟ್ ಅಳವಡಿಸಲಾಗಿತ್ತು. ಆದರೆ ಕೆಲವೇ ಸಮಯದಲ್ಲ್ಲಿ ಲಿಫ್ಟ್ ಕೆಟ್ಟು ಹೋಗಿ ದುರಸ್ತಿಯಾಗದೆ ದೇವರ ಪಾದ ಸೇರಿದೆ ಎಂದು ಭಕ್ತ ಜನರು ಬೇಸರದಿಂದ ನುಡಿಯುತ್ತಿದ್ದಾರೆ.
ದೇವಸ್ಥಾನದ ಮೆಟ್ಟಿಲು ಕಲ್ಲುಗಳನ್ನು ಏರಿಕೊಂಡು ಮೇಲೆ ಬರಲಾಗದೆ ಇರುವ ವಯೋವೃದ್ಧರಿಗೆ ಅನುಕೂಲವಾಗಲೆಂದು ಲಿಫ್ಟ್ ಅಳವಡಿಸಲಾಗಿತ್ತು. ಆದರೆ ಕೆಲವು ದಿನ ನಡೆದ ಲಿಫ್ಟ್ ಒಂದು ದಿನ ತನ್ನಿಂತಾನೆ ಜಾಮ್ ಆಗಿ ಅದರೊಳಗೆ ಸಿಲುಕಿಕೊಂಡವರನ್ನು ರಕ್ಷಿಸಲು ದೇವಸ್ಥಾನದ ಸಿಬ್ಬಂದಿಗೆ ಸಾಕುಸಾಕಾಗಿತ್ತು. ಅದನ್ನು ನಿರ್ಮಿಸಿದ ಕಂಪನಿಯೂ ನಿರ್ವಹಣೆಗೆ ಬಾರದ ಕಾರಣ ಲಿಫ್ಟ್ ಮೂಲೆಗುಂಪಾಯಿತು.