Crime 
ದಕ್ಷಿಣ ಕನ್ನಡ

ಬಸ್‌ನಲ್ಲಿ ಹೃದಯಾಘಾತಕ್ಕೀಡಾಗಿ ಪ್ರಯಾಣಿಕ ಸಾವು

ಭದ್ರಾವತಿ ಜಪತ್‌ನಗರ ನಿವಾಸಿ

ಕಾಸರಗೋಡು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ವ್ಯಕ್ತಿಯನ್ನು ಅದೇ ಬಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲಾಗಿಲಿಲ್ಲ. ಉಪ್ಪಳ ಕೈಕಂಬದಲ್ಲಿರುವ ಗುಜರಿ ಕೆಲಸ ನಿರ್ವಹಿಸುತ್ತಿದ್ದ ಭದ್ರಾವತಿ ಜಪತ್‌ನಗರ ನಿವಾಸಿ ಫಯಾಸ್ ಅಹಮ್ಮದ್(61) ಮೃತರು. ಕಾಸರಗೋಡಿನಿಂದ ತಲಪಾಡಿಗೆ ಹೋಗಲು ಶುಕ್ರವಾರ ಸಂಜೆ ಫಯಾಸ್ ಅಹಮ್ಮದ್ ಬಸ್ ಏರಿದ್ದರು. ಬಸ್ ಬಂದ್ಯೋಡು ತಲುಪುತ್ತಿದ್ದಂತೆ ಸೀಟಿನಲ್ಲಿ ಕುಳಿತಿದ್ದ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಬಸ್ ಚಾಲಕ ಜಿತಿನ್ ಹಾಗೂ ನಿರ್ವಾಹಕ ಅಡ್ಕತ್ತಬೈಲ್ ನಿವಾಸಿ ಪ್ರಣವ್ ಬಸ್ಸನ್ನು ನೇರವಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಜಾಂಡಿಸ್ ಬಾಧಿಸಿ ಮಹಿಳೆ ಸಾವು

ಕಾಸರಗೋಡು: ಜಾಂಡೀಸ್ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಬಾಯಾರು ಕನಿಯಾಲ ಚಿಮಿಣಿತ್ತಡ್ಕ ನಿವಾಸಿ, ಕೂಲಿಕಾರ್ಮಿಕ ಲೋಕೇಶ್ ಎಂಬುವರ ಪತ್ನಿ ಮಮತಾ(37) ಮೃತಪಟ್ಟಿದ್ದಾರೆ. 15 ದಿನದ ಹಿಂದೆ ಅಸೌಖ್ಯ ಬಾಧಿಸಿದ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಹಳದಿ ಕಾಮಾಲೆ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಲಶ್ಶೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪೆರ್ಮುದೆ ಸಮೀಪದ ಮುನ್ನೂರು ನಿವಾಸಿ ಸುಂದರ- ಲಲಿತಾ ದಂಪತಿ ಪುತ್ರಿ.

ಎಂಡಿಎಂಎ ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ

ಕಾಸರಗೋಡು: ಎಂಡಿಎಂಎ ಸಾಗಾಟದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಾಧಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (3ನೇ) ನ್ಯಾಯಾಧೀಶ ರಾಮು ರಮೇಶ್‌ಚಂದ್ರಭಾನು ಅವರು ತಲಾ ಒಂದು ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2018 ನವೆಂಬರ್ 30ರಂದು ತಳಂಗರೆ ಕಡವತ್‌ನಲ್ಲಿ ಕಾಸರಗೋಡು ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 2.21 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದ ಪ್ರಕರಣದಲ್ಲಿ ತಳಂಗರೆ ಕೆ.ಕೆ.ಪುರಂ ಫಾಯಿಸ್ ಮಂಜಿಲ್‌ನ ಕೆ.ಎಂ.ಅಧಿನಾನ್ (32) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು.

ಇನ್ನೊಂದು ಪ್ರಕರಣದಲ್ಲಿ 2021 ಜೂನ್ 21ರಂದು ತೆಕ್ಕಿಲ್ ಸೇತುವೆ ಬಳಿ ಮೇಲ್ಪರಂಬ ಠಾಣೆ ಪೊಲೀಸರು 4.50 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಬೇಕಲ ಪಳ್ಳಿಕೆರೆ ಕಲ್ಲಿಂಗಾಲ್ ನಿವಾಸಿ ಕೆ.ಕೆ. ಅಮೀನುಲ್ಲಾ (29)ನನ್ನು ಬಂಧಿಸಿದ್ದರು. ಈತನಿಗೂ ಒಂದು ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರಕರಣದ ಎರಡನೇ ಆರೋಪಿ ಕೆ.ಎಂ.ಅಬೂಬಕರ್ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ.

ಕಾರಿನ ಟಯರ್ ಸ್ಫೋಟ

ಕಾಸರಗೋಡು: ತ್ರಿಕ್ಕರಿಪುರ ಶಾಸಕ, ಕಾಂಗ್ರೆಸ್ ಮುಖಂಡ ಸಂದೀಪ್ ವಾರಿಯರ್ ಸಂಚರಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿದ್ದು, ಶಾಸಕ ಸೇರಿದಂತೆ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ನಸುಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮಲಪ್ಪುರಂ ಕೋಯಿಚ್ಚನ್ ಎಂಬಲ್ಲಿ ಘಟನೆ ನಡೆದಿದೆ. ತ್ರಿಕ್ಕರಿಪುರದಿಂದ ಚೇತಲೂರಿಗೆ ತೆರಳುತ್ತಿದ್ದಾಗ ಕಾರಿನ ಟಯರ್ ಏಕಾಏಕಿ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೆರಡು ಕಾರುಗಳು ಶಾಸಕರ ಕಾರಿಗೆ ಡಿಕ್ಕಿಯಾಗಿವೆ. ಮೂರು ಕಾರುಗಳಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಶಾಸಕರು ಬೇರೊಂದು ವಾಹನದಲ್ಲಿ ಪ್ರಯಾಣ ಮುಂದುವರಿಸಿದರು.

ಮಗುವನ್ನು ಕಾಣಲು ತೆರಳಿದ್ದಾಗ ಪತಿಯಿಂದ ಹಲ್ಲೆ

ಕಾಸರಗೋಡು: ಮಗುವನ್ನು ನೋಡಲು ಗಂಡನ ಮನೆಗೆ ಹೋಗಿದ್ದಾಗ ಗಂಡನಿಂದ ಹಲ್ಲೆಗೊಳಗಾಗಿ ಗಾಯಗೊಂಡ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಮುಹಮ್ಮದ್ ಎಂಬುವರ ಪುತ್ರಿ ಸುಬೈದಾ (34) ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಬೈದಾ ಕಳೆದ ಒಂದು ತಿಂಗಳಿನಿಂದ ತಾಯಿ ಮನೆಯಲ್ಲಿದ್ದು, ಎಂಟು ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಇತ್ತೀಚೆಗೆ ಎಂಟು ತಿಂಗಳ ಮಗುವನ್ನು ಪತಿ, ಮೊಗ್ರಾಲ್ ಪುತ್ತೂರು ಪಂಜತ್ ಹೌಸ್ ನಿವಾಸಿ ಸಲೀಂ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ಶುಕ್ರವಾರ ಸಂಜೆ ಮಗುವನ್ನು ನೋಡಲು ಪತಿ ಮನೆಗೆ ತೆರಳಿದ್ದಾಗ ಸಲೀಂ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.