ಮೂಡುಬಿದಿರೆಯಲ್ಲಿ ನಡೆದ ಸುಗಮ ಸಂಚಾರ ಸಭೆಯಲ್ಲಿ ರಸ್ತೆ ಗುಂಡಿ, ವಾಹನ ತಪಾಸಣೆ, ಬಸ್‌ಗಳ ವೇಗ, ಪಾರ್ಕಿಂಗ್ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಆರ್‌ಟಿಒ ಅಧಿಕಾರಿ ವೇಣುಗೋಪಾಲ್, ಲೋಕೋಪಯೋಗಿ ಇಲಾಖೆ ಪ್ರೀತಮ್, ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ., ಉಪನಿರೀಕ್ಷಕಿ ಪ್ರತಿಭಾ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಸಮಸ್ಯೆ

ಸುಗಮ ಸಂಚಾರ ಸಭೆಯಲ್ಲಿ ಪ್ರಸ್ತಾಪ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ವಾಹನ ತಪಾಸಣೆ ನೆಪದಲ್ಲಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಆರೋಪ ಸೇರಿದಂತೆ ರಸ್ತೆ ಗುಂಡಿ, ಬಸ್‌ಗಳ ವೇಗ, ಪಾರ್ಕಿಂಗ್ ಸಮಸ್ಯೆಗಳ ಕುರಿತು ಸುಗಮ ಸಂಚಾರ ಸಭೆಯಲ್ಲಿ ಚರ್ಚೆ ನಡೆಯಿತು.

ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂಡುಬಿದಿರೆ ಪುರಸಭೆ ಮಾಜಿ ಸದಸ್ಯ ಹಾಗೂ ವಾಹನ ಚಾಲಕ ಕೊರಗಪ್ಪ, ಪ್ರತಿ ಬುಧವಾರ ಮೂಡುಬಿದಿರೆಗೆ ಆಗಮಿಸುವ ಆರ್‌ಟಿಒ ಇನ್‌ಸ್ಪೆಕ್ಟರ್, ಇಬ್ಬರು ಸಿಬ್ಬಂದಿ 500 ರೂ. ನೀಡಿದರೆ ದಾಖಲೆ ಪರಿಶೀಲಿಸದೆ ವಾಹನಗಳನ್ನು ಪಾಸ್ ಮಾಡುತ್ತಾರೆ ಎಂದು ಆರೋಪಿಸಿದರು. ರಾಜ್ಯ ಹೆದ್ದಾರಿಗಳಲ್ಲಿನ ಗುಂಡಿಗಳನ್ನು ನವೆಂಬರ್, ಲೋಕೋಪಯೋಗಿ ಇಲಾಖೆ ರಸ್ತೆಗಳ ಹೊಂಡಗಳನ್ನು ಡಿಸೆಂಬರ್‌ನಲ್ಲಿ ಮುಚ್ಚಲಾಗುವುದು ಎಂದು ಇಂಜಿನಿಯರ್ ಭರವಸೆ ನೀಡಿದರು.

ಬಸ್‌ಗಳ ವೇಗ, ಟೈಮಿಂಗ್ಸ್ ಕುರಿತು ಚರ್ಚೆ

ಮೂಡುಬಿದಿರೆ-ಮಂಗಳೂರು-ಕಾರ್ಕಳ ಮಾರ್ಗದ ಬಸ್‌ಗಳ ಅತಿವೇಗ, ಕರ್ಕಶ ಹಾರ್ನ್, ನಿಲ್ದಾಣದಲ್ಲಿ ನಿಲ್ಲಿಸದೆ ಪ್ರಯಾಣಿಕರನ್ನು ಇಳಿಸುವ ಕುರಿತು ಆಕ್ಷೇಪ ವ್ಯಕ್ತವಾಯಿತು. ರಾ.ಹೆ. ಕಾಮಗಾರಿಯಿಂದ ಪ್ರಯಾಣದ ಅವಧಿ ಹೆಚ್ಚಿರುವುದರಿಂದ ಮಂಗಳೂರು-ಮೂಡುಬಿದಿರೆ ಪ್ರಯಾಣಕ್ಕೆ 1 ಗಂಟೆ 15 ನಿಮಿಷ ನಿಗದಿಪಡಿಸುವಂತೆ ಪದ್ಮಾಂಬ ಬಸ್ ಮಾಲೀಕರು ಸಲಹೆ ನೀಡಿದರು.

ಮಂಗಳೂರು ನಗರ ಪೊಲೀಸ್ ಡಿಸಿಪಿ ಕೆ.ರವಿ ಶಂಕರ್ ಮಾತನಾಡಿದರು. ಆರ್‌ಟಿಒ ಅಧಿಕಾರಿ ವೇಣುಗೋಪಾಲ್, ಲೋಕೋಪಯೋಗಿ ಇಲಾಖೆ ಪ್ರೀತಮ್, ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ., ಉಪನಿರೀಕ್ಷಕಿ ಪ್ರತಿಭಾ ಉಪಸ್ಥಿತರಿದ್ದರು.

ಖಾಸಗಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ

ಪುರಸಭೆ ಅಧಿಕಾರಿಗಳ ಗೈರಿಗೆ ಆಕ್ಷೇಪ ವ್ಯಕ್ತವಾಯಿತು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ, ಹಳೆಯ ಪೊಲೀಸ್ ಠಾಣೆ ಬಳಿ ಬಸ್‌ಗಳ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಆಟೋಗಳಲ್ಲಿ 15ರಿಂದ 20 ವಿದ್ಯಾರ್ಥಿಗಳನ್ನು ಸಾಗಿಸುತ್ತಿರುವ ಕುರಿತು ಭಾಸ್ಕರ್ ಗಮನ ಸೆಳೆದರು. ಸಂಬಂಧಪಟ್ಟ ಕಾಲೇಜುಗಳಿಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚಿಸಲಾಯಿತು. ಮೈದಾನ ಬಳಕೆ, ವಾಹನ ನಿಲುಗಡೆ, ವಾಹನ ಇನ್‌ಸ್ಪೆಕ್ಷನ್ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.