ದ.ಕನ್ನಡ ಅಂಧರ ಸೇವಾ ಸಂಘದಿಂದ ನೇತ್ರ ತಪಾಸಣಾ ಶಿಬಿರದಲ್ಲಿ ಅಧ್ಯಕ್ಷ ಪಿ.ರವೀಂದ್ರರಾವ್, ಸುಮನಾ ಘಾಟೆ, ಪ್ರದೀಪ್ ಪಾಟಕ್, ಶೋಭಾ ರಾವ್ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ದೃಷ್ಟಿಹೀನರ ಶ್ರೇಯೋಭಿವೃದ್ಧಿಗೆ ಶ್ರಮಿಸಿ

268ನೇ ನೇತ್ರ ತಪಾಸಣಾ ಶಿಬಿರದಲ್ಲಿ ಪಿ.ರವೀಂದ್ರರಾವ್ ಕರೆ

ಮಂಗಳೂರು: ಸಂಘ ಹಾಗೂ ಸಂಘಟನೆ ಬೆಳೆದರೆ ಸಮಾಜದ ಬೆಳವಣಿಗೆಯಾಗುತ್ತದೆ. ಸಂಘದ ಸದಸ್ಯರು ಒಗ್ಗೂಡಿ ಸಮಾಜದಲ್ಲಿರುವ ಆಶಕ್ತರ, ದೃಷ್ಟಿಹೀನರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ದ.ಕನ್ನಡ ಅಂಧರ ಸೇವಾ ಸಂಘದ ಅಧ್ಯಕ್ಷ ಪಿ.ರವೀಂದ್ರರಾವ್ ಹೇಳಿದರು.

ಕಾರ್ಕಳ ತಾಲೂಕಿನ ದುರ್ಗ ಪ್ರದೇಶದ ಹರಿಹರ ಸಭಾಭವನದಲ್ಲಿ ನಡೆದ ಅಂಧರ ಸೇವಾ ಸಂಘ ದಕ್ಷಿಣ ಕನ್ನಡ ಹಾಗೂ ದಿ.ನಾರ್ಕಟ್ ಸೀತಾರಾಮ ಭಟ್ ಹಾಗೂ ದಿ.ಸೀತಾಬಾಯಿ ಲೊಂಡೆ ಇವರ ಸ್ಮರಣಾರ್ಥ ಕರ್ಣಾಟಕ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕಿ ಸುಮನಾ ಘಾಟೆ ಅವರ ಪ್ರಾಯೋಜಕತ್ವದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

45 ವರ್ಷಗಳಿಂದ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ, ಜಾತಿ ಮತ್ತು ಧರ್ಮ ಬೇಧವಿಲ್ಲದೆ ನೊಂದವರಿಗೆ ಬೆಳಕನ್ನು ಕೊಡುವ ಸಂಸ್ಥೆ 268ನೇ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ ಎಂದರು.

ಶಿಬಿರದಲ್ಲಿ 125 ಜನರು ಪ್ರಯೋಜನವನ್ನು ಪಡೆದರು. 80 ಮಂದಿಗೆ ಕನ್ನಡಕವನ್ನು ಹಾಗೂ 25 ಜನರಿಗೆ ಔಷಧ ಹಾಗೂ 25 ಜನರಿಗೆ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರ ಚಿಕಿತ್ಸೆಗೆ ದಿನಾಂಕವನ್ನು ಕೊಡಲಾಯಿತು.

ಡಾ.ಜಯರಾಮಶೆಟ್ಟಿ ಹಾಗೂ ಡಾ. ಹೃಷಿಕೇಶ್ ಅಮೀನ್‌ನವರು ಸಹಕರಿಸಿದರು. ಸುಮನಾ ಘಾಟೆ, ಹರಿಹರ ದೇವಸ್ಥಾನದ ಮೊಕ್ತೇಸರ ಪ್ರದೀಪ ಪಾಟಕ್ ಹಾಗೂ ರಮಾನಾಥ್ ಲೊಂಡೆ ಶುಭಕೋರಿದರು. ಸಂಘದ ಕಾರ್ಯದರ್ಶಿ ಶೋಭಾ ರಾವ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಿಹರ್ ಲೊಂಡೆ ಕಾರ್ಯಕ್ರಮ ನಿರೂಪಿಸಿದರು.