ಉಪ್ಪಿನಂಗಡಿ: ಯೋಜನೆಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕಾದರೆ ಅಧಿಕಾರಿಗಳ ಪಾತ್ರ ಹಿರಿದು. ಶಾಸಕಾಂಗ ತರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಕೆಲಸ ಅಧಿಕಾರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಚೇರಿಗೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಿ ಅವರ ಸಮಸ್ಯೆ ಪರಿಹರಿಸುವ ಕೆಲಸವನ್ನು ಸರ್ಕಾರಿ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪೆರ್ನೆಯ ಎ.ಎಂ.ಆಡಿಟೋರಿಯಂನಲ್ಲಿ ಶನಿವಾರ ಬಂಟ್ವಾಳ ತಾಲೂಕುಮಟ್ಟದ ಪ್ರಜಾ ಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಬಂಟ್ವಾಳ ತಾಲೂಕು ತಹಸೀಲ್ದಾರ್ ಮಂಜುನಾಥ್, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಕಾಧಿಕಾರಿ ಸಚಿನ್ ಕುಮಾರ್, ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ., ಪುತ್ತೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಪ್ರಮುಖರಾದ ಸುನೀಲ್ ನೆಲ್ಸನ್ ಪಿಂಟೋ, ಮೆಕ್ಸಿಂ ಲೋಬೋ, ಸೀತಾರಾಮ ಶೆಟ್ಟಿ, ಸುಲೈಮಾನ್, ಗಣೇಶ್ ರಾಜ್, ಗುಣರಂಜನ್, ಅಬ್ದುಲ್ ರಜಾಕ್, ಉಮೇಶ್, ಮುಹಮ್ಮದ್ ಶರೀಫ್, ಶಿವಪ್ಪ ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಹೈಸ್ಕೂಲ್ ವಿದ್ಯಾರ್ಥಿಗಳ ತಂಡದಿಂದ ನಾಡಗೀತೆ ಹಾಡಿಸಲಾಯಿತು. ಅದು ಮುಗಿದ ಬಳಿಕ ಅಧಿಕಾರಿಯೊಬ್ಬರು ಸ್ವಾಗತಕ್ಕೆ ಮುಂದಾಗುತ್ತಿದ್ದಂತೆ ವೇದಿಕೆಯಲ್ಲಿ ನಿಂತಿದ್ದ ಅಧಿಕಾರಿ ಅಲ್ಲೇ ನಿಂತಿದ್ದ ಇತರ ಅಧಿಕಾರಿಗಳಿಗೆ ವಂದೇ ಮಾತರಂ ಹಾಡಿಸುವ ಬಗ್ಗೆ ಪಿಸುಗುಟ್ಟಿದರು. ತಹಸೀಲ್ದಾರ್, ತಾಪಂ ಇಒ ಸೇರಿದಂತೆ ವೇದಿಕೆಯಲ್ಲಿದ್ದ ಅಧಿಕಾರಿಗಳು ಆಗ ಗೊಂದಲಕ್ಕೀಡಾದರು. ಸ್ವಾಗತವನ್ನು ತಡೆಹಿಡಿಯಲಾಯಿತು. ಆಗ ತಹಸೀಲ್ದಾರ್, ಇಒ ಸೇರಿದಂತೆ ಅಲ್ಲಿದ್ದ ಅಧಿಕಾರಿಗಳೆಲ್ಲರೂ ‘ವಂದೇ ಮಾತರಂ’ ಹಾಡಿಗಾಗಿ ಮೊಬೈಲ್ನಲ್ಲಿ ಹುಡುಕಾಟ ಆರಂಭಿಸಿದ್ದರು. ಆಗ ಅಲ್ಲೇ ಇದ್ದ ಶಾಸಕರ ಆಪ್ತ ಸಹಾಯಕ ರಂಜಿತ್ ತನ್ನ ಮೊಬೈಲ್ನಲ್ಲಿ ಹಾಡನ್ನು ಹುಡುಕಿ ಅದನ್ನು ಮೈಕ್ ಮುಂದೇ ಪ್ಲೇ ಮಾಡಿದರು. ತಹಸೀಲ್ದಾರ್, ಇಒ ಸೇರಿದಂತೆ ಅಲ್ಲಿದ್ದ ಇತರ ಕೆಲ ಅಧಿಕಾರಿಗಳು ಮೈಕ್ ಮುಂದೆ ಬಂದು ನಿಂತರು. ಇಷ್ಟಾಗುವಾಗ ಸುಮಾರು 5 ನಿಮಿಷ ಹಿಡಿದಿತ್ತು. ಸಭೆಯಲ್ಲಿದ್ದವರೂ ವಂದೇ ಮಾತರಂಗೆ ಗೌರವಕೊಟ್ಟು ಎದ್ದು ನಿಂತರು.
ಕಾನೂನಾತ್ಮಕವಾಗಿ ಸರಿ ಇರುವ, ಇತ್ಯರ್ಥವಾಗದ ಅರ್ಜಿಗಳನ್ನು ಪ್ರಜಾಸೇವೆ ಮೂಲಕ ಸ್ಥಳದಲ್ಲಿಯೇ ಪರಿಹರಿಸಿಕೊಡುವ ಕೆಲಸ ಮಾಡಲಾಗುವುದು. ಸ್ಥಳದಲ್ಲಿಯೇ ಪರಿಹಾರಗೊಳಿಸಲು ಸಾಧ್ಯವಾಗದಿದ್ದಲ್ಲಿ 21 ದಿನಗಳಲ್ಲಿ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು. ತಾಲೂಕು, ಹೋಬಳಿ, ಗ್ರಾಮಮಟ್ಟದಲ್ಲಿ ಆಂದೋಲನ ನಡೆಯಲಿದೆ.ಅಶೋಕ್ ಕುಮಾರ್ ರೈ, ಶಾಸಕ