ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಗ್ರಾಮವಿಕಾಸ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬೈಯ ಒಡಿಯೂರು ಶ್ರೀ ಯುವ ಸೇವಾ ಬಳಗದ ಅಧ್ಯಕ್ಷ ಡಾ.ಅದಿಪ್ ಕೆ.ಶೆಟ್ಟಿ ಅವರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಿದರು. ಸಾಧ್ವಿ ಮಾತಾನಂದಮಯೀ, ಬ್ರಿಜೇಶ್ ಚೌಟ, ರಾಜೇಶ್ ನಾಕ್ ಮತ್ತಿತರರು ಇದ್ದರು. 
ದಕ್ಷಿಣ ಕನ್ನಡ

ವಿಕಸಿತ ಭಾರತಕ್ಕೆ ಯೋಜನೆ ಮುನ್ನುಡಿ ODIYOORU

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

ನಿಶಾಂತ ಎನ್ ಬಿಲ್ಲಂಪದವು

ವಿಟ್ಲ: ಗ್ರಾಮವಿಕಾಸ ಯೋಜನೆ ಮೂಲಕ ರಾಷ್ಟ್ರೀಯ ಪ್ರeಯ ಹೆಜ್ಜೆಯಿಡಲು ಸಾಧ್ಯವಾಗಿದೆ. ಗ್ರಾಮದ ವಿಕಾಸಕ್ಕೆ ಸಹಕಾರಿ ಸಂಘ ಬಲ ನೀಡಿದೆ. ವಿಕಸಿತ ಭಾರತಕ್ಕೆ ಗ್ರಾಮವಿಕಾಸ ಮುನ್ನುಡಿಯಾಗಿದ್ದು, ಗ್ರಾಮದ ಅಭಿವೃದ್ಧಿಯಾದಾಗ ದೇಶದ ವಿಕಾಸ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ಶ್ರೀ ಚಾರಿಟೆಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ರಜತ ಸಂಭ್ರಮ ಸಮಿತಿ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಗ್ರಾಮವಿಕಾಸ ರಜತ ಸಂಭ್ರಮ, ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಮುಂಬೈಯ ಒಡಿಯೂರು ಶ್ರೀ ಯುವ ಸೇವಾ ಬಳಗ ಅಧ್ಯಕ್ಷ ಡಾ.ಅದಿಪ್ ಕೆ.ಶೆಟ್ಟಿ ಅವರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಜತ ವಿಕಾಸ ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಬಿಡುಗಡೆ ಮಾಡಿದರು.

ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಕ್ ಯು., ಮೂಡುಬಿದಿರೆ ಶಾಸಕ ಉಮಾನಾಥ ಕೊಟ್ಯಾನ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮುಂಬೈ ಉದ್ಯಮಿ ವಾಮಯ್ಯ ಬಿ.ಶೆಟ್ಟಿ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಮುಂಬೈ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಪುಣೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ವಿ.ಶೆಟ್ಟಿ, ಸಮಿತಿಯ ಕಾರ್ಯಾಧ್ಯಕ್ಷ ಎ.ಸುರೇಶ್ ರೈ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತರಿದ್ದರು.

ಬಂಟ್ವಾಳ ಮೇಲ್ವಿಚಾರಕಿ ಲೀಲಾ ಕೆ., ಕಲ್ಲಡ್ಕ ಮೇಲ್ವಿಚಾರಕಿ ಜಯಲಕ್ಷ್ಮೀ ಪ್ರಭು, ದಯಾ, ಸನ್ಮಾನಿತರ ಪಟ್ಟಿ ಓದಿದರು. ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.  

ಗೌರವಾರ್ಪಣೆ

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿಕಾಸವಾಹಿನಿ ಘಟ ಸಮಿತಿ ಅಧ್ಯಕ್ಷರಿಗೆ, ಸ್ವಉದ್ಯೋಗ ನಡೆಸುವವರಿಗೆ ಗೌರವಾರ್ಪಣೆ, ಯೋಜನೆಯ ಕಾರ್ಯ ಚಟುವಟಿಕೆಗೆ ಉಚಿತ ಸ್ಥಳಾವಕಾಶ ಮಾಡಿದವರಿಗೆ, ೨೦೦೬ರಲ್ಲಿ ಜರುಗಿದ ಸಂಸ್ಕಾರೋತ್ಸವ ಸಮಿತಿ ಬಂಟ್ವಾಳ ತಾಲೂಕಿನ ೮೪ ಗ್ರಾಮಗಳ ಸಂಚಾಲಕರಿಗೆ ಗೌರವ ಅರ್ಪಿಸಲಾಯಿತು.

ತುಳು ತೇರು ಎಳೆಯುವ ಮೂಲಕ ಜನರಲ್ಲಿ ಭಾಷೆ ಸಂಸ್ಕೃತಿಯ ಅರಿವು ಮೂಡಿಸಲಾಗಿತ್ತು. ತುಳು ಭಾಷೆಗೆ ಮಾನ್ಯತೆ ನೀಡಿದ ಸರ್ಕಾರದ ಕ್ರಮ ಅಭಿನಂದನೀಯ. ಮಠ ಮಂದಿರಗಳಿಗೆ  ಸರ್ಕಾರ ಕೊಡುಗೆ ನೀಡಿದೆ. ತುಳುವನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಕೆಲಸವಾಗಬೇಕು.
ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ