ರತಿ 
ದಕ್ಷಿಣ ಕನ್ನಡ

ಕ್ರಿಶ್ಚಿಯನ್ ಸಮುದಾಯದ ಯುವಕನಿಂದ ದೈವ ನರ್ತನಕ್ಕೆ ಆಕ್ಷೇಪ

ಮಂಗಳೂರು: ನಗರದ ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ಫೆ.1ರಂದು ನಡೆದ ನೇಮೋತ್ಸವದಲ್ಲಿ ಬಂಟ ದೈವ ನರ್ತಕ್ಕೆ ಕ್ರಿಶ್ಚಿಯನ್ ಸಮುದಾಯದ ಯುವಕನನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಪಂಬದ ಸಮುದಾಯದವರೇ ಆಗಿರುವ ಸಂಶೋಧನಾ ವಿದ್ಯಾರ್ಥಿ ರತಿ ಎಂಬವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅನಾದಿ ಕಾಲದಿಂದಲೂ ಇಲ್ಲಿನ ಜಾರಂದಾಯ ದೈವಸ್ಥಾನದಲ್ಲಿ ಪಂಬದ ಸಮುದಾಯ ದೈವ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೈವಸ್ಥಾನದ ಆಡಳಿತ ಸಮಿತಿ 2026ನೇ ಸಾಲಿನ ನೇಮೋತ್ಸವ ಸಂದರ್ಭ ಹಿಂದೆ ನರ್ತನ ಸೇವೆ ಮಾಡುತ್ತಿದ್ದವರನ್ನು ಕೈ ಬಿಟ್ಟು ಕಾಸರಗೋಡಿನ ಚಿಪ್ಪಾರು ಬಾಯಾರಿನ ಗಣೇಶ ಪಂಬದರನ್ನು ನೇಮಕ ಮಾಡಿದ್ದರು. ಗಣೇಶ್ ಹಾಗೂ ಆತನ ಅಕ್ಕನ ಮಗ ಸೂರಜ್‌ಗೆ ನೇಮೋತ್ಸವ ಜವಾಬ್ದಾರಿ ನೀಡಲಾಗಿತ್ತು. ಅವರು ಪದವಿನಂಗಡಿಯ ದಿ.ಗಣೇಶ್ ಪಂಬದರ ಕ್ರಿಶ್ಚಿಯನ್ ಪತ್ನಿಗೆ ಜನಿಸಿದ ಪುತ್ರನನ್ನು ನೇಮ ಕಟ್ಟಲು ಬಳಸಿಕೊಂಡಿರುವುದು ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ ಎಂದವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂಬದ ಸಮುದಾಯ ಅಳಿಯ ಕಟ್ಟು ಪ್ರಕಾರ ಯಜಮಾನಿಕೆಯನ್ನು ಹೊಂದಿದ್ದು, ದಿ.ಗಣೇಶ್ ಪಂಬದರ ಪತ್ನಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿರುವುದರಿಂದ ನಿಯಮ ಪ್ರಕಾರ ಅವರ ಪುತ್ರನಿಗೆ ನೇಮ ಕಟ್ಟಲು ಆಗುವುದಿಲ್ಲ. ಈ ಬಗ್ಗೆ ದೈವಸ್ಥಾನದ ಆಡಳಿತ ಸಮಿತಿಯವರಲ್ಲಿ ವಿಚಾರಿಸಿದಾಗ ಅವರಿಗೂ ಮಾಹಿತಿ ಇರಲಿಲ್ಲ. ಈ ವಿಚಾರ ತಿಳಿದ ಅವರು ಮುಂದಿನ ವರ್ಷದಿಂದ ಬಾಯಾರು ಗಣೇಶ ಪಂಬದನನ್ನು ಮುಂದಿನ ವರ್ಷದಿಂದ ನೇಮದ ಸೇವೆಗೆ ಬಳಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಬಾಯಾರಿನ ಗಣೇಶ ಮತ್ತು ಸೂರಜ್‌ನನ್ನು ಪ್ರಶ್ನಿಸಿದಾಗ ಅವರು ಉಡಾಫೆಯಿಂದ ಮಾತನಾಡಿದ್ದಾರೆ ಎಂದರು.
ತುಳುನಾಡಿನ ಹಲವಾರು ಗುತ್ತು ಮನೆತನದವರ ಬಳಿ ಈ ವಿಚಾರ ಹೇಳಿದಾಗ ಅವರು ಗಣೇಶ ಮಾಡಿದ್ದು ತಪ್ಪು ಎಂದು ಹೇಳಿದರೂ ಅವನನ್ನು ವಿರೋಧಿಸುವ ಬದಲಾಗಿ ನನಗೇ ವಿಚಾರವನ್ನು ಕೈ ಬಿಡುವಂತೆ ವಿವಿಧ ರೀತಿಯಲ್ಲಿ ಮನವೊಲಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರವಾಗಿ ರಾಜ್ಯ ಮಹಿಳಾ ಆಯೋಗ, ದ.ಕ. ಜಿಲ್ಲಾಧಿಕಾರಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದೇನೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂದವರು ಹೇಳಿದರು.