ಕಾಸರಗೋಡು: ಕಾಞಂಗಾಡು ಸನಿಹದ ಮಾವುಂಗಾಲ್ ಮೂಲಕಂಡಂ ಲಕ್ಷಂವೀಡ್ ಕಾಲನಿ(ಉನ್ನತಿ)ನಿವಾಸಿ ಸುಧೀಶ್ ಎಂಬುವರ ಪತ್ನಿ ಸುಧೀನಾ(31) ಎಂಬುವರ ಮೃತದೇಹ ಮನೆ ಕೊಠಡಿಯೊಳಗಿನ ಕಿಟಿಕಿ ಸರಳಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ನೇಣು ಬಿಗಿದು ಪತ್ತೆಯಾಗಿದ್ದ ಇವರನ್ನು ತಕ್ಷಣ ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಞಂಗಾಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ದುಡಿಯುತ್ತಿದ್ದರು. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಜಿಲ್ಲಾ ಮೀನುಗಾರಿಕಾ ಇಲಾಖೆ ಮತ್ತು ಮೆರೈನ್ ಎನ್ಫೋರ್ಸ್ಮೆಂಟ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಕರ್ನಾಟಕದ ಎರಡು ದೋಣಿಗಳನ್ನು ವಶಪಡಿಸಿಕೊಂಡಿದ್ದು, ಇದರ ಮಾಲೀಕರಿಗೆ 2.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಂಜೇಶ್ವರ ಕರಾವಳಿಯಿಂದ 12 ನಾಟಿಕಲ್ ಮೈಲಿ ದೂರದಲ್ಲಿ ಕಾರ್ಯಚರಣೆ ನಡೆಸಲಾಗಿದೆ. ದೋಣಿಯಲ್ಲಿದ್ದ ಮೀನು ಹರಾಜು ಹಾಕಲಾಗಿದ್ದು, ಈ ಮೂಲಕ 75 ಸಾವಿರ ರೂ. ಸಂಗ್ರಹಿಸಲಾಗಿದೆ. ಎರಡು ವಾರದೊಳಗಿನ ಅವಧಿಯಲ್ಲಿ ಸೆರೆ ಹಿಡಿಯಲಾದ ನಾಲ್ಕನೇ ಬೋಟು ಇದಾಗಿದೆ. ಈ ಎರಡೂ ದೋಣಿಗಳು ಮಲ್ಪೆ ವ್ಯಾಪ್ತಿಯವುಗಳಾಗಿದೆ. ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಸಿ.ಕೆ.ಶೈನಿ ನಿರ್ದೇಶ ಪ್ರಕಾರ ಕಾರ್ಯಚರಣೆ ನಡೆಸಲಾಗಿದೆ.