ಗಣೇಶ್ ಮೆಡಿಕಲ್ ಮುಂಭಾಗ ಅಳವಡಿಸಿರುವ ನೋ ಪಾರ್ಕಿಂಗ್ ಬೋರ್ಡ್ ಹಾಗೂ ಬಳಿಕ ಬೋರ್ಡ್ ಬರಹ ನಾಪತ್ತೆಯಾಗಿರುವುದು. 
ದಕ್ಷಿಣ ಕನ್ನಡ

ನೋ ಪಾರ್ಕಿಂಗ್ ನಾಮಫಲಕ ಮಾಯ : ಫುಟ್‌ಪಾತ್ ಮೇಲೆಯೇ ವಾಹನ ನಿಲುಗಡೆ

ಪ್ರಮುಖ ಮುಖ್ಯಾಂಶಗಳು

  • ನೋ ಪಾರ್ಕಿಂಗ್ ನಾಮಫಲಕ ಹಠಾತ್ತನೆ ಮಾಯ
  • ಸಂಚಾರಿ ಪೊಲೀಸರು ಮೌನ
  • ಇಂದಿರಾ ಕ್ಯಾಂಟೀನ್ ಗ್ರಾಹಕರ ಪರದಾಟ
ಬೆಳೆಯುತ್ತಿರುವ ಬಿ.ಸಿ.ರೋಡು ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸಮರ್ಪಕ ವ್ಯವಸ್ಥೆ ಇಲ್ಲ ಎನ್ನುವ ಆರೋಪದ ನಡುವೆಯೇ ಬಿ.ಸಿ.ರೋಡಿನ ಹೆದ್ದಾರಿಯಲ್ಲಿರುವ ಮೆಡಿಕಲೊಂದರ ಎದುರುಗಡೆ ಟ್ರಾಫಿಕ್ ಪೊಲೀಸರು ಅಳವಡಿಸಿರುವ ನೋ ಪಾರ್ಕಿಂಗ್ ನಾಮಫಲಕ ಹಠಾತ್ತನೆ ಮಾಯವಾಗಿದೆ.
ಬಿ.ಸಿ.ರೋಡಿನ ಆಡಳಿತಸೌಧದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಇದರ ಮುಂಭಾಗವು ಈಗ ಪಾರ್ಕಿಂಗ್ ವಲಯದಂತಾಗಿದೆ. ಪರಿಣಾಮ ಇಂದಿರಾ ಕ್ಯಾಂಟೀನ್‌ಗೆ ಆಗಮಿಸುವ ಗ್ರಾಹಕರು ಪರದಾಡುವಂತಾಗಿದೆ. ಅದಕ್ಕಾಗಿಯೇ ಕ್ಯಾಂಟೀನ್ ಮುಂಭಾಗದ ಗೇಟ್‌ಗೆ ನೋ ಪಾರ್ಕಿಂಗ್ ಸ್ಥಳ ಎಂದು ಫಲಕವನ್ನು ಸಿಬ್ಬಂದಿ ಅಳವಡಿಸಿದ್ದರೂ, ಬೆಳಗ್ಗೆಯಿಂದ ಸಂಜೆಯವರೆಗೆ ಆಡಳಿತಸೌಧ ಸಹಿತ ವಿವಿಧ ಕಚೇರಿಗಳಿಗೆ ಆಗಮಿಸುವವರು ತನ್ನ ವಾಹನವನ್ನು ಕ್ಯಾಂಟೀನ್ ಮುಂಭಾಗದುದ್ದಕ್ಕೂ ತಾಸುಗಟ್ಟಲೇ ಪಾರ್ಕ್ ಮಾಡಿ ತೆರಳುತ್ತಾರೆ. ಸಂಜೆ 5 ಗಂಟೆ ಬಳಿಕ ಕ್ಯಾಂಟೀನ್ ಪಕ್ಕ ನಿಲುಗಡೆಯಾಗುವ ಫಾಸ್ಟ್‌ಫುಡ್ ವಾಹನಕ್ಕೆ ಬರುವ ಗ್ರಾಹಕರು ತಮ್ಮ ವಾಹನವನ್ನು ಅಲ್ಲಿಯೇ ಪಾರ್ಕ್ ಮಾಡುತ್ತಾರೆ.
ಇದರಿಂದಾಗಿ ಇಂದಿರಾ ಕ್ಯಾಂಟೀನ್‌ಗೆ ಆಗಮಿಸುವ ಗ್ರಾಹಕರು ಪಾರ್ಕ್ ಮಾಡಲಾದ ವಾಹನಗಳ ಮಧ್ಯೆ ನುಸುಳಿಕೊಂಡು ಹೋಗಬೇಕಾಗುತ್ತದೆ ಎಂದು ದೂರಲಾಗಿದೆ. ಕ್ಯಾಂಟೀನ್ ಗೇಟ್‌ಗೆ ಅಳವಡಿಸಲಾದ ನೋ ಪಾರ್ಕಿಂಗ್ ಫಲಕ ನಾಮ್‌ಕಾವಾಸ್ತೆಯಾಗಿದ್ದು, ವಾಹನಗಳು ಫಲಕಕ್ಕೆ ಸಡ್ಡು ಹೊಡೆದು ಅದರ ಮುಂಭಾಗದಲ್ಲೇ ನಿಲುಗಡೆಗೊಳಿಸಿ ಸವಾಲೊಡ್ಡುತ್ತಿವೆ.