ಎಲ್ಯಾರ್ ಪದವು ಸರ್ಕಾರಿ ಶಾಲೆ 
ದಕ್ಷಿಣ ಕನ್ನಡ

ಸರ್ಕಾರಿ ಶಾಲೆಯಲ್ಲಿಲ್ಲ ಮೂಲಸೌಲಭ್ಯ

ಅನ್ಸಾರ್ ಇನೋಳಿ ಉಳ್ಳಾಲ
ಒಂದೆಡೆ ಆಂಗ್ಲ ಮಾಧ್ಯಮದ ಶಿಕ್ಷಣದಿಂದಾಗಿ ಪುನರ್ಜನ್ಮ ಪಡೆದ ಸಂಭ್ರಮ, ಇನ್ನೊಂದೆಡೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಮುಚ್ಚಿಹೋಗುವ ಭೀತಿ. ಇದು ಅಂಬ್ಲಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಯಾರ್ ಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸದ್ಯದ ದುಸ್ಥಿತಿ.

ಮಳೆ ಬಂದರೆ ಸೋರುವ ತರಗತಿ

1997ರಲ್ಲಿ ಮಸೀದಿಯೊಂದರಲ್ಲಿ ಆರಂಭವಾದ ಈ ಶಾಲೆ, 1998ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿತ್ತು. ಅಂದಿನಿಂದ ಇಂದಿನವರೆಗೆ ಶಾಲೆ ಎಂಟನೇ ತರಗತಿವರೆಗೆ ಮೇಲ್ದರ್ಜೆಗೇರಿದ್ದರೂ, ಕಟ್ಟಡದ ಸ್ಥಿತಿ ಮಾತ್ರ ಸುಧಾರಿಸಿಲ್ಲ. ಈ ಶಾಲೆಗೆ ಒಂದು ಆರ್‌ಸಿಸಿ ಕಟ್ಟಡ ಇದ್ದು, ಅದರಲ್ಲಿ ಮೂರು ಕೊಠಡಿಗಳಿವೆ. ಹೆಂಚಿನ ಕಟ್ಟಡದಲ್ಲಿ ಸಭಾಂಗಣ ಹಾಗೂ ಮೂರು ಕೊಠಡಿಗಳಿದ್ದರೂ ನಾಮ್‌ಕೇವಾಸ್ತೆ ರೀತಿಯಲ್ಲಿದೆ. ಮಳೆಗಾಲದಲ್ಲಿ ಈ ಹೆಂಚಿನ ಕಟ್ಟಡ ಸಂಪೂರ್ಣವಾಗಿ ಸೋರುತ್ತಿದ್ದು, ಮಕ್ಕಳು ಪುಸ್ತಕಗಳನ್ನು ಹಿಡಿದು ಕುಳಿತುಕೊಳ್ಳುವುದೇ ಸವಾಲಾಗಿದೆ. 2008-09ರಲ್ಲಿ ನಿರ್ಮಾಣವಾದ ಅಕ್ಷರ ದಾಸೋಹ (ಬಿಸಿಯೂಟ) ಕೊಠಡಿಯೂ ಈಗ ಶಿಥಿಲಾವಸ್ಥೆಯಲ್ಲಿದೆ.
ಪ್ರಸ್ತುತ 1ರಿಂದ 8ನೇ ತರಗತಿವರೆಗೆ 62 ಮಕ್ಕಳು ಹಾಗೂ ಎಲ್‌ಕೆಜಿ, ಯುಕೆಜಿಯಲ್ಲಿ 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷ ಒಂದನೇ ತರಗತಿ ಆಂಗ್ಲ ಮಾಧ್ಯಮವಾಗಿ ಆರಂಭಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷ ಎರಡನೇ ತರಗತಿ ಆರಂಭಿಸುವ ಯೋಜನೆ ಇದೆ.

ಶಾಪವಾದ ಶೌಚಗೃಹ ಸಮಸ್ಯೆ

ಶಾಲೆಯಲ್ಲಿ ಶೌಚಗೃಹದ ಸಮಸ್ಯೆ ತೀವ್ರವಾಗಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲಾ ಕಟ್ಟಡದ ಹಿಂಭಾಗದಲ್ಲಿರುವ ಸಣ್ಣ ಶೌಚಗೃಹಕ್ಕೆ ಮಳೆಗಾಲದಲ್ಲಿ ತೆರಳಲು ಸಾಧ್ಯವಾಗದ ಸ್ಥಿತಿ ಇದೆ. ರಸ್ತೆಯಿಂದ ಹರಿದು ಬರುವ ಚರಂಡಿ ನೀರು ನೇರವಾಗಿ ಶಾಲೆಗೆ ನುಗ್ಗಿ ಶೌಚಗೃಹದ ಮೂಲಕ ಹರಿಯುವುದರಿಂದ, ಅದು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ಇದರಿಂದಾಗಿ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕರಗುತ್ತಿದೆ ಶಾಲಾ ಜಮೀನು

ದಾಖಲೆಗಳ ಪ್ರಕಾರ ಶಾಲೆಗೆ 1.39 ಎಕರೆ ಜಮೀನು ಮೀಸಲಿದೆ. ಆದರೆ, ಆವರಣ ಗೋಡೆಯಿಲ್ಲದ ಕಾರಣ ಸುತ್ತಮುತ್ತಲಿನ ಮನೆಗಳ ನಿರ್ಮಾಣದಿಂದಾಗಿ ಶಾಲಾ ಜಮೀನು ಕರಗುತ್ತಿದೆ. ಇತ್ತೀಚಿನ ಸರ್ವೇ ಪ್ರಕಾರ 1.22 ಎಕರೆ ಮಾತ್ರ ಲಭ್ಯವಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಇಡೀ ಆವರಣವು ಕೃತಕ ನೆರೆಗೆ ತುತ್ತಾಗುತ್ತಿದೆ.

ಶಾಲೆ ಕೊಠಡಿ ಕೊರತೆ ನಿವಾರಣೆಗೆ ವಿಧಾನಸಭೆ ಸ್ಪೀಕರ್ 20 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದಾರೆ. ಶಾಲಾಭಿವೃದ್ಧಿ ಸಮಿತಿಯೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಸ್ಪೀಕರ್ ಹಾಗೂ ಗ್ರಾಪಂ ಸಹಕಾರದಿಂದ ಎಲ್‌ಕೆಜಿ, ಯುಕೆಜಿ ಆರಂಭವಾದ ಮೇಲೆ ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೆ ಕಟ್ಟಡ ಹಳೆಯದಾಗಿದ್ದು, ಶೌಚಗೃಹದ ಸಮಸ್ಯೆಯಿಂದಾಗಿ ಪಾಲಕರು ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ.

ನಮ್ಮ ಶಾಲೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ, ಆದರೆ ಇಲ್ಲಿ ಶೌಚಗೃಹದ ವ್ಯವಸ್ಥೆ ಸರಿಯಿಲ್ಲ. ಆವರಣಗೋಡೆಯಿಲ್ಲದೆ ನಾಯಿಗಳ ಕಾಟ ಹೆಚ್ಚಾಗಿದೆ. ಮಳೆ ಬಂದರೆ ತರಗತಿಗಳು ಸೋರಿ ಪಾಠ ಕೇಳಲು ಕಷ್ಟವಾಗುತ್ತಿದೆ.