ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಮಣಿದು, ತೊಕ್ಕೊಟ್ಟು ರೈಲು ಹಳಿಗೆ ಕ್ರಾಸಿಂಗ್ (ಸುರಂಗ ಮಾರ್ಗ) ವ್ಯವಸ್ಥೆ ಕಲ್ಪಿಸಲು ಒಪ್ಪಿಗೆ ಸೂಚಿಸಿದ್ದ ರೈಲ್ವೆ ಇಲಾಖೆ ಟೆಂಡರ್ ಪ್ರಕ್ರಿಯೆಯನ್ನೂ ಮುಗಿಸಿದೆ. ಆದರೆ ಗುತ್ತಿಗೆ ನೀಡಿ ಒಂಬತ್ತು ತಿಂಗಳು ಕಳೆದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.
ಈ ನಡುವೆ ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ವ್ಯಾಪ್ತಿ ಬದಲಾವಣೆಯಾಗಿದ್ದು, ಕಾಮಗಾರಿ ಆರಂಭಕ್ಕೆ ಮತ್ತಷ್ಟು ಕಾಲಹರಣವಾಗುವ ಆತಂಕ ಎದುರಾಗಿದೆ. ಪರಿಣಾಮವಾಗಿ ನಿತ್ಯ ಜೀವ ಕೈಯಲ್ಲಿಡಿದು ಹಳಿ ದಾಟುವ ಸರ್ಕಸ್ ಮುಂದುವರಿದಿದ್ದು, ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ಇಲಾಖೆಯ ಕಚೇರಿಗಳಿಗೆ ಮತ್ತೆ ಅಲೆದಾಡುವಂತಾಗಿದೆ.
ತೊಕ್ಕೊಟ್ಟು ಒಳಪೇಟೆಯ ಸುತ್ತಮುತ್ತ ಖಾಸಗಿ ಹಾಗೂ ಅನುದಾನಿತ ಶಾಲೆ-ಕಾಲೇಜುಗಳು, ಮಂದಿರ, ಚರ್ಚ್, ಮಸೀದಿಗಳು, ಅಂಬೇಡ್ಕರ್ ಭವನ, ಮಾರುಕಟ್ಟೆ ಮತ್ತು ವಸತಿ ನಿಲಯಗಳಿವೆ. ಉಳ್ಳಾಲ ದರ್ಗಾ, ಭಗವತೀ ಕ್ಷೇತ್ರ, ಬೀಚ್ ಮೊದಲಾದ ಪ್ರಮುಖ ತಾಣಗಳಿಗೆ ಸಾಗಲು ಇದು ಪ್ರಮುಖ ಸಂಪರ್ಕ ಕೊಂಡಿ. ತೊಕ್ಕೊಟ್ಟುವಿನಿಂದ ಹಳಿವರೆಗಿನ ಕಾಲುದಾರಿಯುದ್ದಕ್ಕೂ ಅಂಗಡಿ-ಮುಂಗಟ್ಟುಗಳಿದ್ದು, ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಇದೇ ಮಾರ್ಗವಾಗಿ ಹಳಿ ದಾಟಿ ತೆರಳುತ್ತಾರೆ. ಈ ಹಿಂದೆ ಒಂದೇ ಹಳಿ ಇದ್ದಾಗಲೇ ರೈಲು ಡಿಕ್ಕಿಯಾಗಿ ಹಲವು ಸಾವು-ನೋವುಗಳು ಸಂಭವಿಸಿದ್ದವು. ಜೋಡಿ ಹಳಿ ನಿರ್ಮಾಣವಾದ ಮೇಲಂತೂ ಯಾವ ದಿಕ್ಕಿನಿಂದ ರೈಲು ನುಗ್ಗಿಬರುತ್ತದೋ ತಿಳಿಯದೆ ಜೀವಬಲಿ ಹೆಚ್ಚಾಗಿತ್ತು.
ಕೇರಳ-ತಮಿಳುನಾಡು ಸಂಪರ್ಕಿಸುವ ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಹಾಗೂ ಪ್ಯಾಸೆಂಜರ್ ರೈಲುಗಳು ಸದಾ ಸಂಚರಿಸುವ ಈ ಮಾರ್ಗದಲ್ಲಿ ಅಪಾಯ ತಪ್ಪಿಸಲು ರೈಲ್ವೆ ಇಲಾಖೆ 2021ರ ಸೆಪ್ಟೆಂಬರ್‌ನಲ್ಲಿ ಕಬ್ಬಿಣದ ತಡೆಗೋಡೆ ಹಾಕಿ ರಸ್ತೆ ಬಂದ್ ಮಾಡಿತ್ತು. ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ, ಪರ್ಯಾಯ ವ್ಯವಸ್ಥೆಯ ಹೊಣೆಯನ್ನು ಸ್ಥಳೀಯ ನಗರಸಭೆಯ ಮೇಲೆ ಹೊರಿಸಿ ಕೈತೊಳೆದುಕೊಂಡಿತ್ತು.
ನಗರಸಭೆಯಿಂದ ಯಾವುದೇ ಪರ್ಯಾಯ ವ್ಯವಸ್ಥೆಯಾಗದ ಹಿನ್ನೆಲೆಯಲ್ಲಿ, 2024ರ ಫೆಬ್ರವರಿಯಲ್ಲಿ ಇಲಾಖೆಯು ಪೂರ್ಣ ಪ್ರಮಾಣದ ಗೇಟ್ ಅಳವಡಿಸಿತು. ಇದರಿಂದಾಗಿ ಯುವಕರು ಗೇಟ್ ಮೇಲಿಂದ ಜಿಗಿದು, ಮಹಿಳೆಯರು-ಮಕ್ಕಳು ಕೆಳಭಾಗದ ಕಿರಿದಾದ ಜಾಗದಲ್ಲಿ ನುಸುಳಿ ಹಳಿ ದಾಟುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧರು ಮತ್ತು ಅಸ್ವಸ್ಥರ ಗೋಳಂತೂ ಹೇಳತೀರದು
ಆರಂಭದಲ್ಲಿ ಮೇಲ್ಸೇತುವೆಯ ಸಂಪೂರ್ಣ ವೆಚ್ಚವನ್ನು ನಗರಸಭೆಯೇ ಭರಿಸಬೇಕೆಂದು ರೈಲ್ವೆ ಪಟ್ಟುಹಿಡಿದಿತ್ತು. ಬಳಿಕ ಅಂದಿನ ಸ್ಪೀಕರ್ ಯು.ಟಿ. ಖಾದರ್ ಸೂಚನೆ ಮೇರೆಗೆ, ನಗರಸಭೆ ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಅವರ ಮನವಿಗೆ ಸ್ಪಂದಿಸಿ ಸುರಂಗಮಾರ್ಗದ ರೂಪುರೇಷೆ ಸಿದ್ಧಪಡಿಸಲಾಯಿತು. ವೆಚ್ಚವನ್ನು 60ಃ40 ಅನುಪಾತದಲ್ಲಿ ಭರಿಸುವಂತೆ ಇಲಾಖೆ ಪ್ರಸ್ತಾಪಿಸಿದರೂ ನಗರಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ.
ನಗರಸಭೆಯಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅಂತಿಮವಾಗಿ ರೈಲ್ವೆ ಇಲಾಖೆಯೇ 1.55 ಕೋಟಿ ರೂ. ವೆಚ್ಚದಲ್ಲಿ ಸುರಂಗಮಾರ್ಗ ನಿರ್ಮಾಣಕ್ಕೆ ಮುಂದಾಗಿ ಕಳೆದ ವರ್ಷ ಟೆಂಡರ್ ಆಹ್ವಾನಿಸಿತ್ತು. ಈ ವರ್ಷದ ಜನವರಿ 24ರಂದು ಕೇರಳ ಮೂಲದ ಸಂಸ್ಥೆಗೆ 12 ತಿಂಗಳ ಗಡುವಿನೊಂದಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಗುತ್ತಿಗೆ ನೀಡಿ ಒಂಬತ್ತು ತಿಂಗಳು ಕಳೆದರೂ, ಇದೇ ಅವಧಿಯಲ್ಲಿ ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಆಡಳಿತಾತ್ಮಕ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಕಾಮಗಾರಿ ಆರಂಭ ವಿಳಂಬವಾಗಿದೆ ಎನ್ನಲಾಗಿದೆ.
ತೊಕ್ಕೊಟ್ಟಿನಲ್ಲಿ ಸಾರ್ವಜನಿಕ ಕ್ರಾಸಿಂಗ್‌ಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಪಾಲಕ್ಕಾಡ್‌ನಿಂದ ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳುವ ತಾಂತ್ರಿಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ 15 ರಿಂದ 20 ದಿನಗಳ ಒಳಗಾಗಿ ಸ್ಥಳದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಬ್ರಿಜೇಶ್ ಚೌಟ, ಸಂಸದ
ಸುರಂಗ ಮಾರ್ಗದ ವೆಚ್ಚವನ್ನು 60ಃ40 ಅನುಪಾತದಲ್ಲಿ ಭರಿಸುವ ಪ್ರಸ್ತಾಪಕ್ಕೆ ನಗರಸಭೆಯಲ್ಲಿ ಅನುಮೋದನೆ ಸಿಕ್ಕಿರಲಿಲ್ಲ. ಇದೀಗ ರೈಲ್ವೆ ಇಲಾಖೆಯೇ ಸಂಪೂರ್ಣ ವೆಚ್ಚ ಭರಿಸಿ ಟೆಂಡರ್ ಪ್ರಕ್ರಿಯೆ ಮುಗಿಸಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಂಡು ಜನರಿಗೆ ಅನುಕೂಲವಾಗಲಿಯು.ಪಿ.ಅಯೂಬ್ ಮಂಚಿಲ, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ
ಇದು ಕೇವಲ ವಾಹನ ಸವಾರರ ಪ್ರಶ್ನೆಯಲ್ಲ; ಪ್ರತಿದಿನ ಶಾಲೆ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರ ಸುರಕ್ಷತೆಯ ಪ್ರಶ್ನೆ. ಇಲ್ಲಿ ಸುರಕ್ಷಿತ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸುವಂತೆ ಶಿವಾಜಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸಂಸದರಿಗೆ ಮನವಿ ಸಲ್ಲಿಸಲಾಗಿದೆ.ಸಿರಿಲ್ ರಾಬರ್ಟ್ ಡಿಸೋಜ, ನಿವೃತ್ತ ಸರ್ಕಾರಿ ನೌಕರ