ಮಂಗಳೂರು : ಸಣ್ಣ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಎರಡು ನೆರೆಕರೆ ಮನೆಯವರು ದೊಣ್ಣೆ, ತಲವಾರು ಹಿಡಿದು ಪರಸ್ಪರ ಹಲ್ಲೆ ನಡೆಸಿರುವ ಘಟನೆ ಬಜಿಲಕೇರಿಯಲ್ಲಿ ನಡೆದಿದ್ದು ಈ ಬಗ್ಗೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಘಟನೆಯಲ್ಲಿ ಮಹಿಳೆ ಸಹಿತ ಮೂವರು ಗಾಯಗೊಂಡಿದ್ದಾರೆ.
ನೆರೆಕರೆ ವಾಸಿ ರಮಾನಂದ ಶೆಟ್ಟಿ ಪ್ರತಿದಿನ ಅವಾಚ್ಯವಾಗಿ ಬೈದುಕೊಂಡು ಹೋಗುತ್ತಿದ್ದು ಮಂಗಳವಾರದಂದು ಈ ಬಗ್ಗೆ ಮಾತನಾಡಲು ಹೋಗಿದ್ದಾಗ ರಮಾನಂದ ಶೆಟ್ಟಿ ಅವರ ಪುತ್ರರಾದ ಮಹೇಶ್ ಶೆಟ್ಟಿ ಮತ್ತು ಪ್ರೀತಮ್ ಶೆಟ್ಟಿ ತಲವಾರು ಹಾಗೂ ದೊಣ್ಣೆಯಿಂದ ಅನಿತಾ ಮತ್ತು ಅವರ ಪುತ್ರ ತೇಜಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಅನಿತಾ ಅವರ ಪತಿ ಲೋಕೇಶ್ ಅವರಿಗೂ ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅನಿತಾ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿಯೂ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುನಿತಾ ಶೆಟ್ಟಿ ಅವರು ನೀಡಿದ ದೂರಿನಂತೆ ತೇಜಸ್, ಲೋಕೇಶ್ ಮತ್ತು ಅನಿತಾ ವಿರುದ್ದವೂ ಪ್ರಕರಣ ದಾಖಲಾಗಿದೆ. ಮೂವರು ಕೂಡ ಕಲ್ಲು, ಮರದ ದೊಣ್ಣೆ ಮತ್ತು ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುನಿತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.