ರಾಷ್ಟ್ರೀಯ ಫಿಡೆ ರೇಟೆಡ್ ಚಾಂಪಿಯನ್‌ಶಿಪ್‌ನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿದರು. ಸುಧೀರ್ ಕುಮಾರ್ ರೆಡ್ಡಿ, ಮಧುಕರ್ ಟಿ.ಎನ್., ರಾಜು ಕೆ. ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ರಾಷ್ಟ್ರೀಯ ಫಿಡೆ ರೇಟೆಡ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಮಂಗಳೂರು : ಭಾರತದಲ್ಲಿ ದೈಹಿಕ ಸಾಮರ್ಥ್ಯದ ಕ್ರೀಡೆಯ ಜತೆಗೆ ಚೆಸ್‌ನಂತಹ ಬುದ್ದಿಮತ್ತೆಯ ಕ್ರೀಡೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ಡಿಕೆಸಿಎ), ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ (ಕೆಎಸ್‌ಸಿಎ) ಆಶ್ರಯದಲ್ಲಿ ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನವಮಂಗಳೂರು ಬಂದರು ಪ್ರಾಧಿಕಾರ ಪ್ರಾಯೋಜಿತ 39ನೇ ರಾಷ್ಟ್ರೀಯ ಅಂಡರ್-11 ಓಪನ್ ಮತ್ತು ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್-2026 ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳ ಜತೆಗೆ ಅವರ ಪೋಷಕರು ಬಂದಿರುವುದು ಸಂತೋಷ. ಮಂಗಳೂರು ಸುರಕ್ಷತೆ ಮತ್ತು ಶುಚಿತ್ವದ ನಗರವಾಗಿದೆ. ಇಲ್ಲಿನ ಜನ, ಆಹಾರ, ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳಲು ಉತ್ತಮ ಅವಕಾಶ. ಚೆಸ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದಾರೆ ಎಂದರು.
ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಯಾಗಿದ್ದರು. ಚೆಸ್ ಎನ್ನುವುದು ಕೇವಲ ಒಂದು ಆಟವಲ್ಲ. ಇದು ಬುದ್ಧಿವಂತಿಕೆ, ಏಕಾಗ್ರತೆ, ತಾಳ್ಮೆ, ದೂರದೃಷ್ಟಿ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವ ಅದ್ಭುತ ಕ್ರೀಡೆಯಾಗಿದೆ. ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡುವುದು ಎಷ್ಟು ಮುಖ್ಯವೋ, ಅದನ್ನು ಚೆಸ್ ನಮಗೆ ಕಲಿಸುತ್ತದೆ ಎಂದರು.
ರಾಜ್ಯ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ್ ಟಿ.ಎನ್. ಮಾತನಾಡಿ, ರಾಷ್ಟ್ರೀಯ ಚೆಸ್ ಪಂದ್ಯಾವಳಿ ಆಯೋಜಿಸುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 28 ಸಾವಿರ ನೊಂದಾಯಿತ ಕ್ರೀಡಾಳುಗಳಿದ್ದಾರೆ. ಅಗ್ರ ಶ್ರೇಯಾಂಕದ ಆಟಗಾರರು ನಮ್ಮಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದರು.
ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ರಾಜು ಕೆ., ರಾಷ್ಟ್ರೀಯ ಚೆಸ್ ಅಸೋಸಿಯೇಶನ್‌ನ ಭವೇಶ್ ಪಟೇಲ್, ರಾಜ್ಯ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ್ ಟಿ.ಎನ್., ರಾಜ್ಯ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಗ್ಯ್ರಾಂಡ್ ಮಾಸ್ಟರ್ ತೇಜಕುಮಾರ್ ಎಂ.ಎಸ್., ನೀವಿಯಸ್ ಸೊಲ್ಯೂಷನ್ಸ್ ಸಂಸ್ಥೆಯ ನಿರ್ದೇಶಕ ಅಜಯ್ ಪ್ರಭು, ಎನ್‌ಎಂಪಿಎ ಅಧಿಕಾರಿ ಪ್ರದೀಪ್, ಎಂಆರ್‌ಪಿಎಲ್‌ನ ಅಧಿಕಾರಿ ಸಂದೇಶ್ ಕುಟಿನ್ಹೊ, ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಕಾರ್ಯದರ್ಶಿ ರಮ್ಯಾ ಎಸ್.ರೈ. ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್ ಸ್ವಾಗತಿಸಿದರು. ರಾಜ್ಯ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ರಮೇಶ್ ಕೋಟೆ ವಂದಿಸಿದರು. ಲವಿಟಾ ಕಾರ್ಯಕ್ರಮ ನಿರೂಪಿಸಿದರು. 29 ರಾಜ್ಯಗಳಿಂದ 644 ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಆ.8ರ ತನಕ ಪಂದ್ಯಾವಳಿ ನಡೆಯಲಿದೆ.