ನಮೋ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಕ್ಯಾ.ಬ್ರಿಜೇಶ್ ಚೌಟ ಚಾಲನೆ ನೀಡಿದರು. ವೇದವ್ಯಾಸ ಕಾಮತ್, ಪ್ರೇಮಾನಂದ ಶೆಟ್ಟಿ ಮೊದಲಾದವರಿದ್ದರು.
ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಗ್ಯಪೂರ್ಣ ವಿಕಸಿತ ಭಾರತದ ಪರಿಕಲ್ಪನೆಯ ಸಂಸತ್ ಕ್ರೀಡೋತ್ಸವದ ಭಾಗವಾಗಿ ಶನಿವಾರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಮೋ ಬ್ಯಾಡ್ಮಿಟನ್ ಪಂದ್ಯಾವಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಯ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಿದೆ. ಆರೋಗ್ಯವಂಥ ಭಾರತ ನಿರ್ಮಾಣದ ಪ್ರಯತ್ನವೇ ಈ ಸಂಸತ್ ಕ್ರೀಡೋತ್ಸವದ ಉದ್ದೇಶ ಎಂದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಭಾರತ ದೇಶವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯ ಹೆಜ್ಜೆ ಹಾಕುತ್ತಿದೆ. ಕೇವಲ ಫಿಟ್ ಇಂಡಿಯಾ ಭಾರತ ಮಾತ್ರ ವಿಕಸಿತ ಭಾರತವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ. ಒಂದು ಯಂಗ್ ಇಂಡಿಯಾ ಮಾತ್ರ ವಿಕಸಿತ ಭಾರತವಾಗಲಿದೆ. ಹಾಗೆಯೇ ಒಂದು ಆತ್ಮನಿರ್ಭರ ಭಾರತ ಮಾತ್ರ ವಿಕಸಿತ ಭಾರತವಾಗಿ ನಿರ್ಮಾಣವಾಗುವುದಕ್ಕೆ ಸಾಧ್ಯ. ನಾವೆಲ್ಲ ಪ್ರಧಾನಿಯವರ ಕನಸಿನ ಆ ವಿಕಸಿತ ಭಾರತದ ಕನಸಿನತ್ತ ಹೆಜ್ಜೆ ಹಾಕುವುದಕ್ಕೆ ಕಾರ್ಯೋನ್ಮುಖರಾಗಬೇಕೆಂದು ಕ್ಯಾ. ಚೌಟ ಕರೆ ನೀಡಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ಸಂಸತ್ ಕ್ರೀಡೋತ್ಸವು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬಹಳ ಯಶಸ್ವಿಯಾಗಿ ಈ ಸಂಸತ್ ಕ್ರೀಡಾ ಮಹೋತ್ಸವನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ಬ್ಯಾಡ್ಮಿಂಟನ್ ಆಟವಾಡಿ ಗಮನಸೆಳೆದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರಿದ್ದರು.