ದಕ್ಷಿಣ ಕನ್ನಡ

ಕರಾವಳಿಯ ಉಭಯ ಜಿಲ್ಲೆಗಳಿಗೆ ಕೈ ತಪ್ಪಿದ ಮೈಸೂರು ದಸರಾ ಸ್ತಬ್ಧಚಿತ್ರ

ಮಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಜರಗುವ ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸ್ತಬ್ಧಚಿತ್ರ ಪಾಲ್ಗೊಳ್ಳುವ ಅವಕಾಶ ಕೈ ತಪ್ಪಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ‘ಕರಾವಳಿ ಸಂಸ್ಕೃತಿಯ ಸೊಬಗು’ ಯಕ್ಷಗಾನ, ಭೂತಾರಾಧನೆ, ಮೀನುಗಾರಿಕೆ, ರಫ್ತು, ಸಂಪರ್ಕ ವ್ಯವಸ್ಥೆ ಸೇರಿದಂತೆ ಒಟ್ಟು ಜಿಲ್ಲೆಯ ಸಾಂಸ್ಕೃತಿಕ ಚಿತ್ರಣವನ್ನು ಸ್ತಬ್ಧಚಿತ್ರದ ಮೂಲಕ ಕಟ್ಟಿ ಕೊಡಲು ಸಿದ್ಧತೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ತಬ್ಧಚಿತ್ರದ ಮಾದರಿಯನ್ನು ಸಮಿತಿಗೆ ಸಲ್ಲಿಸಲಾಗಿತ್ತು.

ಪ್ರತೀ ವರ್ಷ ರಾಜ್ಯದ 31 ಜಿಲ್ಲೆಗಳಿಗೂ ಸ್ತಬ್ಧಚಿತ್ರ ಪ್ರಸ್ತುತಪಡಿಸಲು ಅವಕಾಶವಿತ್ತು. ಆದರೆ ಈ ವರ್ಷ ಮೈಸೂರು, ಬೆಂಗಳೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗ ಮಾಡಿದ ಕಾರಣ ಮೈಸೂರು ವಿಭಾಗದಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಗೆ ಮಾತ್ರ ಅವಕಾಶ ದೊರಕಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳನ್ನು ಕೈ ಬಿಡಲಾಗಿದೆ.

ರಾಜ್ಯ ಮಟ್ಟದ ಸಮಿತಿಯು ನಾಲ್ಕು ವಿಭಾಗಗಳಿಂದ ಸಲ್ಲಿಕೆಯಾದ ಸ್ತಬ್ಧಚಿತ್ರ ಮಾದರಿಗಳನ್ನು ಆಯ್ಕೆ ಮಾಡುವಾಗ ಆಯಾ ಜಿಲ್ಲೆಗಳ ವೈಶಿಷ್ಟೃತೆಗಳನ್ನು ಪರಿಗಣಿಸಿ, ಜಿಲ್ಲೆಗಳು ಗುರುತಿಸಿಕೊಂಡಿರುವ ಕಾರ್ಯಕ್ಷೇತ್ರ, ಹೆಸರುವಾಸಿಯಾದ ಪ್ರವಾಸಿ ತಾಣಗಳು, ಪರಿಸರ ಸ್ನೇಹಿ, ಮನಮೋಹಕ ದೃಶ್ಯಗಳು, ಕಲಾತ್ಮಕ ಚಿಂತನೆಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಸಾಧನೆಗಳನ್ನು ಬಿಂಬಿಸುವತಹ, ಸ್ತ್ರೀಯರ ಸಾಧನೆಗಳು ಕುರಿತು ಪರಿಶೀಲಿಸಿ ಕರ್ನಾಟಕದ ವೈವಿಧ್ಯತೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ 15 ಜಿಲ್ಲೆಗಳಿಗಷ್ಟೇ ಪ್ರಾತಿನಿಧ್ಯ ನೀಡಲಾಗಿದೆ.

ಸಚಿವರಿಂದ ಪ್ರಯತ್ನ

ದಕ್ಷಿಣ ಕನ್ನಡ ಜಿಲ್ಲೆಗೆ ಸ್ತಬ್ಧಚಿತ್ರ ಅವಕಾಶ ಕೈ ತಪ್ಪಿದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಸಮಾಧಾನಗೊಂಡಿದ್ದು, ಆಯ್ಕೆ ಸಮಿತಿಯನ್ನು ಸಂಪರ್ಕಿಸಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೆ ಜಂಬೂ ಸವಾರಿ ಮೆರವಣಿಗೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ಸ್ತಬ್ಧಚಿತ್ರ ತಯಾರಿ ಮಾಡಲು ಸಮಯಾವಕಾಶ ಸಿಗುವುದು ಕಷ್ಟ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರಸ್ತುತಪಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿನ ಸಂಸ್ಕೃತಿ ಪ್ರತಿಬಿಂಬಿಸುವ ಮಾದರಿ ಕಳುಹಿಸಲಾಗಿತ್ತು. 10 ಲಕ್ಷ ರೂ. ಅನುದಾನವೂ ಮಂಜೂರಾಗಿತ್ತು. ಆದರೆ ಈ ಬಾರಿ 15 ಜಿಲ್ಲೆಗಳಿಗಷ್ಟೇ ಅವಕಾಶ ಕಲ್ಪಿಸಿದ ಕಾರಣ ಆಯ್ಕೆಯಾಗಿಲ್ಲ.

ಮಂಜುನಾಥ ಹೆಗಡೆ

ಉಪ ನಿರ್ದೇಶಕರು, ಗ್ರಾಮೀಣ ಕೈಗಾರಿಕೆ