ಶಡ್ರಕ್ ಇಮ್ಯಾನುವೆಲ್  
ದಕ್ಷಿಣ ಕನ್ನಡ

ಇಸ್ರೇಲ್‌ನಲ್ಲಿ ಮಂಗಳೂರು ವ್ಯಕ್ತಿ ನಿಗೂಢ ಸಾವು

ತಿಂಗಳ ಬಳಿಕ ತಾಯ್ನಡಿಗೆ ತಲುಪಿದ ಮೃತದೇಹ

ಮಂಗಳೂರು: ಇಸ್ರೇಲ್‌ನಲ್ಲಿ ತಿಂಗಳ ಹಿಂದೆ ನಾಪತ್ತೆಯಾಗಿ, ಮೃತಪಟ್ಟಿದ್ದ ಶಕ್ತಿನಗರದ ವ್ಯಕ್ತಿಯ ಮೃತದೇಹ ತಾಯ್ನಡಿಗೆ ತಲುಪಿದ್ದು, ಬುಧವಾರ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಶಕ್ತಿನಗರ ಕಾರ್ಮಿಕ ಕಾಲನಿ ಬಳಿಯ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಅವರು ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದರು. ಅ.16ರಂದು ಮನೆಯವರ ಜತೆ ಮಾತನಾಡುತ್ತಿದ್ದಾಗಲೇ ಸಂಪರ್ಕ ಕಡಿತಗೊಂಡಿತ್ತು. ಒಂದು ವಾರದ ಬಳಿಕ ಶೆಡ್ರಕ್ ಮೃತಪಟ್ಟ ಬಗ್ಗೆ ಕುಟುಂಬಕ್ಕೆ ಮಾಹಿತಿ ಲಭಿಸಿತ್ತು.

ಆರಂಭದಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಶೆಡ್ರಕ್, ಬಳಿಕ ನಝರತ್ ನಗರದ ನೊಫ್ ಹಗಲಿಲ್‌ನಲ್ಲಿ ಯುಸಿಟಿ ಲಿಕ್ವಿಡ್ ಸೊಲ್ಯೂಶನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅ.16ರಂದು ರಾತ್ರಿ ಪತ್ನಿಗೆ ಮೆಸೇಜ್ ಮಾಡಿದ್ದರು. ಅದಕ್ಕೂ ಮೊದಲು ಮನೆಯವರೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಕರೆಯಲ್ಲಿರುವಾಗಲೇ ಸಂಪರ್ಕ ಕಡಿತಗೊಂಡಿತ್ತು. ಆ ಬಳಿಕ ನಿರಂತರವಾಗಿ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ.

ಮನೆಯವರು ಆತಂಕಗೊಂಡು ಅ.21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಇ ಮೇಲ್ ಮೂಲಕ ದೂರು ನೀಡಿದ್ದರು. ಇಸ್ರೇಲ್‌ನಲ್ಲಿ ಶೆಡ್ರಕ್ ನಾಪತ್ತೆಯಾಗಿದ್ದರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿತ್ತು. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದು ಅಲ್ಲಿನ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಒಂದು ತಿಂಗಳ ಬಳಿಕ ಶವವನ್ನು ಕಳುಹಿಸಿಕೊಟ್ಟಿದ್ದು, ಮಂಗಳವಾರ ಮಂಗಳೂರು ತಲುಪಿದೆ. ಬುಧವಾರ ನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕೊಲೆ ಶಂಕೆ: ಮಗ ಉದ್ಯೋಗಕ್ಕಾಗಿ ಇಸ್ರೇಲ್‌ಗೆ ಹೋಗಿದ್ದ. ಪ್ರತಿದಿನ ಕರೆ ಮಾಡಿ ಮಾತನಾಡುತ್ತಿದ್ದ. ಆತ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿರುವಾಗಲೇ ಕರೆ ಕಡಿತಗೊಂಡಿತ್ತು. ಬಳಿಕ ನಾಪತ್ತೆಯಾಗಿದ್ದ. ಇದೀಗ ಆತನ ಶವ ನೋಡುವಂತಾಗಿದೆ. ಅಲ್ಲಿ ಯಾರೋ ಆತನನ್ನು ಕೊಲೆ ಮಾಡಿರುವ ಶಂಶಯ ಇದೆ. ಆದ್ದರಿಂದ ಅಲ್ಲಿನ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ, ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಶೆಡ್ರಕ್ ತಾಯಿ ಆಗ್ರಹಿಸಿದ್ದಾರೆ.