ಕಾಂಚನದ ಕಾಂಚನೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ರಾಘವೇಶ್ವರ ಶ್ರೀ, ಡಾ.ಡಿ.ವೀರೇಂದ್ರ ಹೆಗ್ಗಡೆ, ವಿನಯ ಕುಮಾರ್ ಸೊರಕೆ, ಹರೀಶ್ ಕುಮಾರ್ ಇತರ ಗಣ್ಯರಿದ್ದರು.  
ದಕ್ಷಿಣ ಕನ್ನಡ

ಸಂಗೀತಕ್ಕೆ ಸಮರ್ಪಿಸಿಕೊಂಡ ಕಾಂಚನ ಮನೆತನ ದೇಶದ ಆಸ್ತಿ : ಡಿ.ಕೆ.ಶಿವಕುಮಾರ್

ಶತಮಾನದಿಂದ ಸಂಗೀತ ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಮರ್ಪಣಾಭಾವದಿಂದ ಶ್ರಮಿಸುತ್ತಿರುವ ಕಾಂಚನ ಮನೆತನ ದೇಶದ ಆಸ್ತಿಯಾಗಿ ಹೊರಹೊಮ್ಮಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಕಾಂಚನದ ಕಾಂಚನೋತ್ಸವ ಸಂಭ್ರಮದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ ವಿ.ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮೋತ್ಸವ ಪ್ರಯುಕ್ತ ಕಾಂಚನದಲ್ಲಿ ನಿರ್ಮಾಣವಾಗಿರುವ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆ ಲೋಕಾರ್ಪಣೆೆಗೊಳಿಸಿ ಮಾತನಾಡಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾವೇಶ್ವರ ಭಾರತಿ ಸ್ವಾಮೀಜಿ, ಜಗತ್ಪ್ರಸಿದ್ಧವಾದ ಕಾಂಚನ ಊರಿನ ಮಣ್ಣು, ನೀರು, ಗಾಳಿಯಲ್ಲೂ ಸಂಗೀತ ಇದೆ. ಕಾಂಚನ ಸಂಗೀತ ಶಾಲೆಗೆ ಪರಂಪರೆ ಇದ್ದು, ಶುದ್ಧ ಸಂಗೀತವನ್ನು ಉಳಿಸಿ ಬೆಳೆಸಿದ ಕೀರ್ತಿ ಕಾಂಚನ ಮನೆತನದ್ದಾಗಿದೆ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ಪೂರ್ವಜರು ಸ್ಥಾಪಿಸಿರುವ ಈ ಸಂಸ್ಥೆಯನ್ನು ರೋಹಿಣಿ ಸುಬ್ಬರತ್ನಂ ಕುಟುಂಬ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ, ತಮಿಳುನಾಡಿನಿಂದ ಬಂದು ಕನ್ನಡ ಭಾಷಿಗರಾಗಿ ಬಳಿಕ ಕಾಂಚನ ಎಂಬ ಊರಿನಲ್ಲಿ ಸಂಗೀತದ ಕಂಪು ಪ್ರಸಹರಿಸಿದ ಕಾಂಚನ ಮನೆತನದವರ ಸಾಧನೆ ಅದ್ಭುತ. ಹಲವಾರು ಸಂಗೀತ ದಿಗ್ಗಜರನ್ನು ನೀಡಿದ ಕಾಂಚನ ದಕ್ಷಿಣ ಭಾರತದ ತಿರುವಯನ್ನೂರು ಎಂದರೂ ತಪ್ಪಲ್ಲ ಎಂದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಸಂಗೀತವೂ ಧರ್ಮದ ಬೇರಾಗಿದೆ. ಗ್ರಾಮೀಣ ಪ್ರದೇಶವಾದರೂ ಕಾಂಚನ ಮನೆತನ ಸಂಗೀತದ ಮೂಲಕ ದೇಶಾದ್ಯಂತ ಹೆಸರು ಗಳಿಸಿದೆ. ಇಲ್ಲಿನ ಸಂಗೀತ ಪಾವಿತ್ಯ ಉಳಿಸಿಕೊಂಡಿದೆ, ದೇಶಾದ್ಯಂತ ಇರುವ ಸಂಗೀತ ಕ್ಷೇತ್ರದ ಬಹಳಷ್ಟು ವಿದ್ವಾಂಸರು ಕಾಂಚನ ಗರಡಿಯಿಂದ ಮೂಡಿಬಂದವರು. ಕಾಂಚನದ ಮಹಿಮೆ ಉಳಿಸಿಕೊಂಡು ಸಂಗೀತ ಲೋಕಕ್ಕೆ ಶಕ್ತಿ ಕೊಡಬೇಕು.