ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಕೊಲೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

ಮಂಗಳೂರು: ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ 2023ರಲ್ಲಿ ನಡೆದಿದ್ದ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಜಗದೀಶ್ ವಿ.ಎನ್ ಅವರು ತೀರ್ಪು ನೀಡಿದ್ದಾರೆ.
ಕೇರಳ ಕಣ್ಣೂರಿನ ಮಡಂತಬೆಟ್ಟು ನಿವಾಸಿ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಶಿಕ್ಷೆಗೊಳಗಾದ ಅಪರಾಧಿ. ಬಿನು ಕೊಲೆಯಾದ ವ್ಯಕ್ತಿ.
2023 ಡಿ.10ರಂದು ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಇರುವ ಮೀನಗಾರಿಕಾ ಬೋಟ್ ಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಮಂಗಳಾ ಬೋಟ್ ಯಾರ್ಡ್‌ನಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ಬಿನು ಜಿ ಮತ್ತು ಮರದ ಕೆಲಸ ಮಾಡಿಕೊಂಡಿದ್ದ ಜಾನ್ಸ್ ನ್ ಎನ್.ವಿ ಅಲಿಯಾಸ್ ಬಿನೋಯ್ ಎಂಬವರುಗಳ ನಡುವೆ ಕೆಲಸದ ನಂತರ ತಂಗುವ ಶೆಡ್‌ನಲ್ಲಿ ಇಬ್ಬರೂ ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಈ ಸಂದರ್ಭ ಜಾನ್ಸನ್ ಬಿನುವಿನ ಎದೆಯ ಪಕ್ಕೆಗೆ ಕಬ್ಬಿಣದ ಉಳಿಯಿಂದ ಇರಿದು ಕೊಲೆ ಮಾಡಿದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಜಾನ್ಸನ್ ಜಾಮೀನು ಸಿಗದೆ ಸುಮಾರು 3 ವರ್ಷ 2 ತಿಂಗಳಿನಿಂದ ವಿಚಾರಣಾ ಬಂದಿಯಾಗಿದ್ದ ಸಮಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ಅಪರಾಧ ಸಾಬೀತಾಗಿದೆ.
ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಆಗಿನ ಪ್ರಭಾರ ಪೊಲೀಸ್ ನಿರೀಕ್ಷಕ ಸಂದೀಪ್.ಜಿ.ಎಸ್ ನಡೆಸಿ, ನಂತರ ಪಣಂಬೂರು ನಿರೀಕ್ಷಕ ಮಂಜುನಾಥ .ಎಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರಕಾರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದರು.