ಮುಡಿಪು ವಲಯ ಕುಲಾಲ ಸಂಘದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಸಾಧನೆಗಾಗಿ ಶಂಕರ್ ಕುಲಾಲ್, ಜಗದೀಶ್ ಬಜ್ಜಾರು ಹಾಗೂ ಸುಜಿತ್ ಮರೋಳಿ ಅವರನ್ನು ಸನ್ಮಾನಿಸಲಾಯಿತು. 
ದಕ್ಷಿಣ ಕನ್ನಡ

ಯುವಪೀಳಿಗೆಗೆ ಮನೆಯಲ್ಲೇ ಸಂಸ್ಕಾರ ಶಿಕ್ಷಣ : ಪ್ರಶಾಂತ್ ಕಾಜವ

ಕುಲಾಲ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆಯಿದ್ದರೂ ಸಮಾಜದಲ್ಲಿ ತಂಟೆ ತಕರಾರಿಗೆ ಅವಕಾಶ ನೀಡದೆ ಘನತೆಯಿಂದ ಬದುಕುತ್ತಿದೆ. ಹಿರಿಯರ ಆದರ್ಶ ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ. ಯುವಪೀಳಿಗೆಗೆ ಮನೆಯಲ್ಲೇ ಸಂಸ್ಕಾರದ ಜತೆ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದು ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಹೇಳಿದರು.
ಮುಡಿಪು ವಲಯ ಕುಲಾಲ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ವೇದಿಕೆಯಲ್ಲಿ ಭಾನುವಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮ ಕ್ಷೇತ್ರದ ಸಾಧನೆಗಾಗಿ ಶಂಕರ್ ಕುಲಾಲ್, ಜಗದೀಶ್ ಬಜ್ಜಾರು ಹಾಗೂ ಸುಜಿತ್ ಮರೋಳಿ ಅವರನ್ನು ಸನ್ಮಾನಿಸಲಾಯಿತು. ಕುಲಾಲ ಸಂಘ ಮುಡಿಪು ವಲಯಾಧ್ಯಕ್ಷ ಪುಂಡರೀಕಾಕ್ಷ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
‘ಶೈಕ್ಷಣಿಕ ಮತ್ತು ಜೀವನ ಮಾರ್ಗದರ್ಶನ’ ವಿಚಾರದಲ್ಲಿ ಸಾಮಾಜಿಕ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿದರು. ಹಿರಿಯರಾದ ದರ್ಣಪ್ಪ ಮೂಲ್ಯ ಚಕ್ರಕೋಡಿ, ಕುರ್ನಾಡು ಗ್ರಾಪಂ ಅಧ್ಯಕ್ಷೆ ಪ್ರೇಮಾ ಗಟ್ಟಿ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಕುಲಾಲ ಮಾತೃ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್, ಸಿದ್ದಕಟ್ಟೆ ಕುಲಾಲ ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಯ್ಯ ಸಿದ್ದಕಟ್ಟೆ, ವಗ್ಗ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್ ವಗ್ಗ, ಕುಲಶೇಖರ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.