ಎಂಪಿಸಿ-ರೋಟರಿ ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ 2026ನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶರತ್ ಬುಡಲೆ ಎಸ್., ರಾಜಾ ಬಿ.ಎಸ್., ಪ್ರೊ.ಹರಿಕೃಷ್ಣ ಭಟ್ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ದೇಶದ ಪ್ರಗತಿಗೆ ಎಂಎಸ್‌ಎಂಇ ಕೊಡುಗೆ ಮಹತ್ತರ ಸಂಸದ ಕೋಟ ಹೇಳಿಕೆ

ಮಂಗಳೂರು:

ಶಿಕ್ಷಣ ಪಡೆದ ಬಳಿಕ ಉದ್ಯೋಗಕ್ಕೆ ಸರ್ಕಾರವನ್ನು ಅವಲಂಬಿಸುವುದು ಸರಿಯಲ್ಲ. ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಉದ್ಯಮ ಸ್ಥಾಪಿಸುವ ಮೂಲಕ ಸ್ವಾವಲಂಬಿಯಾಗುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ (ಎಂಪಿಸಿ) ವತಿಯಿಂದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದೊಂದಿಗೆ ಶುಕ್ರವಾರ ನಗರದ ರೆಡ್‌ಕ್ರಾಸ್ ಪ್ರೇರಣಾ ಹಾಲ್‌ನಲ್ಲಿ ಎಂಪಿಸಿ-ರೋಟರಿ ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ 2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಒಟ್ಟು ಜನಸಂಖ್ಯೆಯ ಕೇವಲ ಶೇ.1ರಷ್ಟು ಮಂದಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಲು ಸಾಧ್ಯ. 1.49 ಕೋಟಿ ಉದ್ಯಮಗಳು ಎಂಎಸ್‌ಎಂಇನಲ್ಲಿ ನೋಂದಣಿ ಆಗಿದ್ದು, ಅವರು 15 ಲಕ್ಷ ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. ಅಂದರೆ ಈ ಉದ್ಯಮದಲ್ಲಿರುವ ಬದ್ಧತೆ, ಸೂಕ್ಷ್ಮತೆ, ಶ್ರಮ ಎಷ್ಟು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.
ದೇಶದಲ್ಲಿ ಮಹತ್ತರ ಬದಲಾವಣೆ
ಒಂದೊಮ್ಮೆ ದೇಶದ ಆರ್ಥಿಕ ಅಸಮಾನತೆ ವೇಳೆ ನಮ್ಮ ದೇಶದ ಚಿನ್ನವನ್ನು ವಿದೇಶದಲ್ಲಿ ಅಡವಿರಿಸಲಾಗಿತ್ತು, ಆದರೆ ಇಂದು ಭಾರತ 68 ರಾಷ್ಟ್ರಗಳಿಗೆ ಸಾಲ ಕೊಡುವ ಹಂತಕ್ಕೆ ಬೆಳೆದಿದೆ. ವಿದ್ಯುತ್, ಶೌಚಗೃಹ ಇಲ್ಲದ ಊರುಗಳಿದ್ದ ಭಾರತದಲ್ಲಿ ಇಂದು ಎಲ್ಲ ಮನೆಗಳಿಗೂ ವಿದ್ಯುತ್, ಶೌಚಗೃಹ ಕಲ್ಪಿಸಲಾಗಿದೆ. ದೇಶದಲ್ಲಿ ಸುರಕ್ಷತೆ, ಭದ್ರತೆ ಎಲ್ಲ ರೀತಿಯಲ್ಲೂ ಪ್ರಗತಿ ಕಂಡುಕೊಳ್ಳುವ ಹಂತಕ್ಕೆ ದೇಶದ ಬದಲಾವಣೆ ಆಗಿದೆ. ಇಷ್ಟು ವರ್ಷ ಭಾರತದಲ್ಲಿ ಏನು ಆಗಿದೆ ಎಂದು ಪ್ರಶ್ನಿಸುವವರು ಇದನ್ನೆಲ್ಲ ತಿಳಿದುಕೊಳ್ಳಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಎಂಆರ್‌ಪಿಎಲ್ ಸಂಸ್ಥೆಯ ಜಿಜಿಎಂ (ಮೆಟೀರಿಯಲ್ಸ್) ಶರತ್ ಬುಡಲೆ ಎಸ್. ಮಾತನಾಡಿ, ಉತ್ಪಾದನಾ, ಸೇವಾ ವಲಗಳಿಂದ ದೇಶದ ಆರ್ಥಿಕತೆ ಬೆಳವಣಿಗೆ ಸಾಧಿಸಿದೆ. ಉದ್ಯಮ ಕ್ಷೇತ್ರದ ಹೊಸ ಹೊಸ ಆವಿಷ್ಕಾರ, ಯೋಜನೆಗಳು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯುವ ಸಮುದಾಯಕ್ಕೆ ದಾರಿ ದೀಪವಾಗಿದೆ. ಇಂತಹ ಕಾರ್ಯಗಾರಗಳು ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರಿಗೆ ಪ್ರಯೋಜನವಾಗಲಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಸಿಒಒ ರಾಜಾ ಬಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಎಸ್‌ಎಂಇ, ಸ್ಟಾರ್ಟ್‌ಅಪ್‌ಗಳು ಉದ್ಯೋಗ ಸೃಷ್ಟಿಸುವ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದೆ. ಸಣ್ಣ ಹಂತದಿಂದ ಆರಂಭವಾಗುವ ಉದ್ಯಮಗಳೇ ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತವೆ ಎಂಬುದಕ್ಕೆ ಪ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಸಂಸ್ಥೆಗಳೇ ನಮ್ಮ ಮುಂದಿದೆ ಎಂದರು.
ಜಪಾನ್/ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಕಮಿಟಿ ಮೆಂಬರ್ ಪ್ರೊ.ಹರಿಕೃಷ್ಣ ಭಟ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ಮಂಗಳೂರು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್., ಕಾರ್ಯದರ್ಶಿ ಜಾಕ್ಸನ್ ಸಲ್ಡಾನ್ಹ, ಡಾ.ದೇವದಾಸ್ ರೈ, ಎಂಪಿಸಿ ಅಧ್ಯಕ್ಷ ಯು.ರಾಮ ರಾವ್ ಮತ್ತಿತರರು ಇದ್ದರು.
ಎಂಪಿಸಿ ಕಾನ್‌ಕ್ಲೇವ್ ಡೈರೆಕ್ಟರ್ ಹಾಗೂ ಮಹಾಪೋಷಕ್ ಸಿಎ ಎಸ್.ಎಸ್. ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂಪಿಸಿ ಕಾರ್ಯದರ್ಶಿ ಡಾ.ಪಿ.ಜಿ.ಮಹೇಶ್ ವಂದಿಸಿದರು. ಸಿಎ ಯಶಸ್ವಿನಿ ಅಮೀನ್ ಹಾಗೂ ಡ್ಯಾರಿಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ವಿಷಯಗಳಿಗೆ ಸಂಬಂಧಿಸಿ ಉದ್ಯಮ ಕಾರ್ಯಗಾರಗಳು ನಡೆಯಿತು.