ವರ್ಣಬೆಟ್ಟು _ಎಲೆಕ್ಟ್ರಿಕ್ _ಶಾಕ್ _ಮದರ್ _ಸನ್ _ಡೆತ್, ಮರ್ಸಿ ಮಸ್ಕರೇನಸ್, ಶೋನ್ ಮಸ್ಕರೇನಸ್ 
ದಕ್ಷಿಣ ಕನ್ನಡ

ವಿದ್ಯುತ್ ಶಾಕ್‌ಗೆ ತಾಯಿ, ಮಗ ಬಲಿ

ವರ್ಣಬೆಟ್ಟುವಿನಲ್ಲಿ ದುರಂತ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ತಾಯಿ ಮರ್ಸಿ ಮಸ್ಕರೇನಸ್ (45) ಮತ್ತು ಮಗ ಶೋನ್ ಮಸ್ಕರೇನಸ್ (18) ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆ ಕಾರ್ಮಿಕ ಸುಂದರ ಪೂಜಾರಿ ಸ್ಥಳಕ್ಕೆ ಬಂದಾಗ ದುರಂತ ಗಮನಕ್ಕೆ ಬಂದಿದೆ.

ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶೋನ್ ಸ್ನಾನ ಮಾಡಿ ಬಂದ ಬಳಿಕ ಮನೆಯ ಹೊರಭಾಗದಲ್ಲಿದ್ದ ತಂತಿಗೆ ಒದ್ದೆ ಬಟ್ಟೆಗಳನ್ನು ಒಣಗಿಸಲು ಹಾಕುವ ಸಂದರ್ಭ ವಿದ್ಯುತ್ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ. ಮಗನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆಂಚಿನ ಮನೆಗೆ ಮರದ ಬದಲಾಗಿ ಕಬ್ಬಿಣದ ಪಕ್ಕಾಸು ಅಳವಡಿಸಲಾಗಿತ್ತು. ವಿದ್ಯುತ್ ಕಂಬದಿಂದ ಕಬ್ಬಿಣದ ಪಕ್ಕಾಸಿಗೆ ನೇರ ಸಂಪರ್ಕ ಕಲ್ಪಿಸಲಾಗಿತ್ತು ಎನ್ನಲಾಗಿದೆ. ವಿದ್ಯುತ್ ತಂತಿಯ ಸಂಪರ್ಕದಿಂದ ಕಬ್ಬಿಣದ ಭಾಗಕ್ಕೆ ವಿದ್ಯುತ್ ಪ್ರವಹಿಸಿ, ಬಟ್ಟೆ ಒಣಗಿಸಲು ಹಾಕುವ ವೇಳೆ ಶೋನ್‌ಗೆ ವಿದ್ಯುತ್ ಶಾಕ್ ತಗುಲಿರಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮರ್ಸಿ ಅವರ ಪತಿ ಸೈಮನ್ ಮಸ್ಕರೇನಸ್ 15 ವಷರ್ಗಳ ಹಿಂದೆ ಮೃತಪಟ್ಟಿದ್ದರು. ತಾಯಿ ಮತ್ತು ಮಗ ಮನೆಯಲ್ಲಿ ವಾಸವಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸೈಮನ್ ಅವರ ಸಹೋದರ ಜೆರಿ ಮಸ್ಕರೇನಸ್ ಕುಟುಂಬದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಅವರು ವಿದೇಶದಿಂದ ಮರಳಿದ ಬಳಿಕ ಮೃತದೇಹಗಳ ಅಂತ್ಯಕ್ರಿಯೆ ನಡೆಯಲಿದೆ.