ಅಶಕ್ತರಿಗೆ ಉಚಿತ ಸೇವೆ ನೀಡುವ ಕ್ಯಾಂಟಿನ್. 
ದಕ್ಷಿಣ ಕನ್ನಡ

ಅನ್ನದಾನದಲ್ಲಿ ಆನಂದ ಕಾಣುವ ಕುಲಾಲ್ : ಸಂಕ್ರಾಂತಿಯಂದು ಸೇವೆಯ ಸಂಕಲ್ಪ

ಸೌಮ್ಯ ಆರ್

ಪ್ರಮುಖ ಮುಖ್ಯಾಂಶಗಳು

  • ಪುಟ್ಟ ಕ್ಯಾಂಟಿನ್ ಮಾಲೀಕನ ಮಾದರಿ ಸೇವೆ
  • ಅಶಕ್ತರಿಗೆ ನಿರಂತರ ಅನ್ನದಾಸೋಹದ ಆಸರೆ
ಹಬ್ಬಗಳೆಂದರೆ ಕೇವಲ ಸಂಭ್ರಮವಲ್ಲ, ಅವುಗಳ ಹಿಂದೆ ಪರರಿಗೆ ನೆರವಾಗುವ ಸದಾಶಯವೂ ಇರುತ್ತದೆ ಎಂಬುದನ್ನು ಮೂಡುಬಿದಿರೆ ಹೋಟೆಲ್ ಮಾಲೀಕರೊಬ್ಬರು ಸಾಬೀತುಪಡಿಸಿದ್ದಾರೆ. ಮಕರ ಸಂಕ್ರಮಣದ ಈ ಪುಣ್ಯಕಾಲದಲ್ಲಿ ಸಮಾಜದ ಅಶಕ್ತ ವರ್ಗದವರಿಗೆ ನೆರವಾಗುವ ಮೂಲಕ ಆನಂದ ಕುಲಾಲ್ ಮಾದರಿ ಸೇವೆಯೊಂದಕ್ಕೆ ನಾಂದಿ ಹಾಡಿದ್ದಾರೆ.

ಹಸಿದವರಿಗೆ ಆಶಾಕಿರಣವಾದ ‘ಕ್ಯಾಂಟೀನ್’

ಸೇವೆಯೇ ಪರಮಧರ್ಮ

ಆನಂದ ಕುಲಾಲ್ ಕೇವಲ ಹೋಟೆಲ್ ಉದ್ಯಮಿಯಲ್ಲದೆ, ಶ್ರಮಜೀವಿ ಹಾಗೂ ಸಂಘಟನಾ ಚತುರರು. ಅವರು ಇಷ್ಟು ವರ್ಷಗಳಿಂದ ಮಾಡಿಕೊಂಡು ಬಂದ ಸಾಮಾಜಿಕ ಕಾರ್ಯಗಳ ಒಂದು ಭಾಗವಾಗಿ ಈ ‘ಅನ್ನದಾನ’ ಯೋಜನೆ ಪ್ರಾರಂಭಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅಥವಾ ದೈಹಿಕ ನ್ಯೂನತೆಯಿಂದ ದುಡಿಯಲಾಗದೆ ಹಸಿವಿನಿಂದ ಬಳಲುವವರಿಗೆ ಈ ಯೋಜನೆ ವರದಾನವಾಗಿದೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಬದಲಾಗಿ ಮಕರ ಸಂಕ್ರಮಣದ ದಿನದಿಂದ ಪ್ರಾರಂಭಗೊಂಡು ಪ್ರತಿದಿನ ಈ ಸೇವೆ ಮುಂದುವರಿಯಲಿದೆ.

ಸಮಾಜಸೇವೆಯಲ್ಲಿ ಸದಾ ಸಕ್ರಿಯ

ಆನಂದ ಕುಲಾಲ್ ತಮ್ಮ ಕ್ಯಾಂಟೀನ್ ಕೆಲಸದ ಬಿಡುವಿನಲ್ಲೂ ಸಾರ್ವಜನಿಕ ಸೇವೆಗೆ ಸಮಯ ಮೀಸಲಿಟ್ಟಿದ್ದಾರೆ. ಸಂಘದ ಸಕ್ರಿಯ ಸದಸ್ಯರಾಗಿ ಸಮುದಾಯದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಯುವ ಸಂಘಟನೆ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಸ್ವಚ್ಛತಾ ಕಾರ್ಯ, ಅಶಕ್ತರಿಗೆ ಮನೆ ನಿರ್ಮಿಸಿಕೊಡುವ ಶ್ರಮದಾನದಂತಹ ಕಾರ್ಯಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.
ಒಂದು ಸಣ್ಣ ಕ್ಯಾಂಟೀನ್ ನಡೆಸುತ್ತಾ, ತಮಗೆ ಬರುವ ಅಲ್ಪ ಲಾಭದಲ್ಲೇ ಸಮಾಜದ ಬಡವರಿಗೆ ನೆರವಾಗುವ ಆನಂದ ಕುಲಾಲ್‌ರ ಈ ಮಾನವೀಯ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ 11 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದೇನೆ. ಜೀವನ ನಿರ್ವಹಣೆ ಜತೆಗೆ ಸಮಾಜಸೇವೆಯಲ್ಲೂ ತೊಡಗಿರುವುದರಿಂದ ಇಂತಹದೊಂದು ಸೇವೆಯ ಸಂಕಲ್ಪವನ್ನು ಬಹಳಷ್ಟು ವರ್ಷಗಳಿಂದ ಮಾಡಿದ್ದೆ. ಅದು ಈ ಸಂದರ್ಭದಲ್ಲಿ ಸಕಾರಗೊಳ್ಳುತ್ತಿದೆ. ಈ ಸೇವೆಯನ್ನು ಯಾರೂ ದುರುಪಯೋಗ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ.