ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಪೇಮೆಂಟ್ ಕೋಟಾದಡಿ ಸಚಿವರಾದವರು ಪೇಮೆಂಟ್ ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಲಂಚ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿರುವುದುವುದು ಸ್ಪಷ್ಟವಾಗಿದೆ ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಚಿವರುಗಳೇ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ರಾಜ್ಯ ಲೋಕಾಯುಕ್ತ ಎನ್.ಬಿ. ವೀರಪ್ಪ ಅವರು ಕರ್ನಾಟಕದಲ್ಲಿ 100ರಲ್ಲಿ 63ಮಂದಿ ಲಂಚ ಕೊಡಬೇಕಾಗಿದೆ ಎಂದು ಹೇಳಿರುವುದು ರಾಜ್ಯದ ಭ್ರಷ್ಟಾಚಾರದ ಕೈಗನ್ನಡಿಯಾಗಿದೆ. ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿರುವುದು ಇದಕ್ಕೊಂದು ನಿದರ್ಶನ ಎಂದರು.
ಮುಡಾ, ಕೆಪಿಎಸ್‌ಸಿ ಸೇರಿದಂತೆ ರಾಜ್ಯ ಸರ್ಕಾರದಲ್ಲಿ ಒಂದರ ಹಿಂದೆ ಒಂದು ಭ್ರಷ್ಟಾಚಾರಗಳು ಹೊರಬರುತ್ತಿವೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯ ಬಿಜೆಪಿ ಪಾದಯಾತ್ರೆ ಆರಂಭಿಸಿದೆ. ಕೆಆರ್‌ಡಿಎಲ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಯಬೇಕೆಂದು ಹೇಳಿದರು.
ರೆಡ್ಡಿಯ ಹೊಟ್ಟೆಪಾಡಿನ ಹೇಳಿಕೆ: ಸಚಿವ ಬಸವರಾಜರಾಯ ರೆಡ್ಡಿ ಮುಸ್ಲಿಂ ಧರ್ಮ ಶ್ರೇಷ್ಟ ಎಂದು ಹೇಳಿಕೆ ನೀಡಿರುವುದರ ಹಿಂದೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ನಾಣ್ಣುಡಿ ಒಪ್ಪುತ್ತದೆ. ಈ ರೀತಿ ಹೇಳಿಕೆ ನೀಡುವ ಇವರು ಚುನಾವಣೆ ಸಮೀಪಿಸುವಾಗ ದೇವಸ್ಥಾನ ಎದುರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈಗ ಹೊಟ್ಟೆಪಾಡಿಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದು, ಅದಕ್ಕೆ ತಕ್ಕ ಶಾಸ್ತಿ ಮುಂದೆ ಸಿಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ಸಂದೀಪ್ ಪಚ್ಚನಾಡಿ, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್, ಮಾಧ್ಯಮ ಸಂಚಾಲಕ ಅರುಣ್ ಶೇಟ್ ಉಪಸ್ಥಿತರಿದ್ದರು.