ಸಚಿವ ದಿನೇಶ್ ಗುಂಡೂರಾವ್ 
ದಕ್ಷಿಣ ಕನ್ನಡ

ಔಷಧ ಪೂರೈಕೆ ಸಮಸ್ಯೆ ಕೇಂದ್ರ ಸರಿಪಡಿಸಬೇಕು ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಮಧ್ಯ ಪ್ರಾಚ್ಯದಿಂದ ಬರುತ್ತಿದ್ದ ಕೆಲವು ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಔಷಧ ತಯಾರಿಕಗೆ ಕಚ್ಚಾ ವಸ್ತುಗಳು ಬರುತ್ತಿಲ್ಲ. ಈ ಹಿಂದೆ ಕೊಟ್ಟಿರುವ ಆರ್ಡರ್‌ಗಳ ಪೂರೈಕೆ ಆಗುತ್ತಿಲ್ಲ. 30 ದಿನ ಸಮಯ ಕೊಡಿ ಎಂದು ಟೆಂಡರ್ ವಹಿಸಿಕೊಂಡವರು ಹೇಳುತ್ತಿದ್ದಾರೆ. ಕೆಲವು ಔಷಧಗಳ ಬೆಲೆ ಹೆಚ್ಚಾಗಿದೆ. ದರ ಹೆಚ್ಚಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಥಳೀಯ ತಯಾರಕರಿಗೆ ಗ್ಯಾಸ್, ಇಂಧನ ಸಮಸ್ಯೆಯಾದರೆ ಕಷ್ಟ ಆಗಬಹುದು. ಸದ್ಯ ಆತಂಕ ಪಡುವ ಅಗತ್ಯವಿಲ್ಲ. ಕದನ ವಿರಾಮ ಆದರೆ ನಮಗೆ ಸಮಸ್ಯೆ ಇಲ್ಲ. ಆಯಿಲ್, ಪೆಟ್ರೋಲಿಯಂ ಸೆಕ್ಟರ್ ನ ಎಲ್ಲಾ ಕಂಪನಿಗಳಿಗೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ಬೇರೆ ದೇಶದಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. ಬಹಳ ದೊಡ್ಡ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎಂದರು.
ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಬೇಕು. ಸುಮ್ಮನೆ ಸಮಸ್ಯೆ ಇಲ್ಲ ಎಂದು ಹೇಳಬಾರದು. ಅನೇಕ ಕಡೆ ತಯಾರಿಕೆ ಶೇ.50 ಕ್ಕೆ ಇಳಿಸಿದ್ದಾರೆ. ಕೋವಿಡ್ ಸಂದರ್ಭದ ಪರಿಸ್ಥಿತಿಯಂತಾಗಿದೆ. ಜನರಿಗೆ ಸ್ಪಷ್ಟವಾಗಿ ವಿಷಯ ತಿಳಿಸಬೇಕು. ಎಲ್ಲಾ ಚೆನ್ನಾಗಿದೆ ಅಂತಾ ಹೇಳಿ ಜನರನ್ನು ದಾರಿ ತಪ್ಪಿಸಬಾರದು. ನಾವು ಕೇಂದ್ರ ಸರ್ಕಾರವೇ ಹೊಣೆ ಅಂತಾ ಹೇಳೊದಕ್ಕೆ ಆಗುವುದಿಲ್ಲ. ಪರ್ಯಾಯ ಕ್ರಮ, ನಿಜಾಂಶವನ್ನು ಜನರ ಮುಂದೆ ಇಡಬೇಕು. ಎಲ್ಲಾ ಕಡೆ ಕಮರ್ಷಿಯಲ್ ಗ್ಯಾಸ್‌ಗೆ ತೊಂದರೆ ಇದೆ ಎಂದರು.
ಉಪಚುನಾವಣೆಯಲ್ಲಿ ಗೆಲುವು ನಿಶ್ಚಿತ
ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂಗ ಗೆಲುವು ಸಾಧಿಸುವ ವಿಶ್ವಾಸವಿದೆ. ನಾವು ಎಲ್ಲ ವರ್ಗ, ಧರ್ಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾರನ್ನೂ ದೂರ ಮಾಡುವ ಪ್ರಶ್ನೆ ಬರುವುದಿಲ್ಲ. ಒಂದು ಕೋಮು ಇನ್ನೊಂದು ಕೋಮು ಅಂತಾ ಸೀಮಿತ ಅಲ್ಲ. ಚುನಾವಣೆ ಸಂದರ್ಭ ಟಿಕೆಟ್ ಸಿಕ್ಕಿಲ್ಲ ಎಂದು ಕೆಲ ಆಕಾಂಕ್ಷಿಗಳಿಗೆ ನೋವು ಇರಬಹುದು. ಅದರಿಂದ ದೊಡ್ಡ ಸಮಸ್ಯೆ ಆಗುವುದಿಲ್ಲ. ನಮ್ಮವರೆಲ್ಲಾ ಹೋಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಕೊಟ್ಟಿಲ್ಲ. ಹಾಗಂತ ಲಿಂಗಾಯತರು ಯಾರು ಓಟು ಹಾಕಿಲ್ಲ ಅಂತಾ ಹೇಳೊಕೆ ಆಗುತ್ತಾ?
ಉಪಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರಗಳ ಬಗ್ಗೆ ಸಿ.ಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾವು ಚರ್ಚೆ ಮಾಡುವ ಅಗತ್ಯ, ಅನಿವಾರ್ಯತೆ, ಅವಶ್ಯಕತೆ ಇಲ್ಲ ಎಂದವರು ಹೇಳಿದರು.